ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ 'ಮಹಿಳಾ ಮ್ಯಾರಥಾನ್'ನಲ್ಲಿ ಕಾಲ್ತುಳಿತದ ಸನ್ನಿವೇಶ ಉಂಟಾಗಿ ಅನೇಕ ಬಾಲಕಿಯರು ಗಾಯಗೊಂಡ ಹಿನ್ನೆಲೆ ಪಕ್ಷದ ಜಿಲ್ಲಾಧ್ಯಕ್ಷ ಅಶ್ಫಾಕ್ ಸಕ್ಲೇನಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಂಬರುವ 2022 ರ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷವು ಮಂಗಳವಾರ ಬರೇಲಿಯ ಬಿಷಪ್ ಮಂಡಲ್ ಇಂಟರ್ ಕಾಲೇಜಿನಲ್ಲಿ 'ಲಡಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ, ನಾನು ಹೋರಾಡಬಲ್ಲೆ) ಹೆಸರಿನಲ್ಲಿ ಬಾಲಕಿಯರ ಮ್ಯಾರಾಥಾನ್ ಹಮ್ಮಿಕೊಂಡಿತ್ತು.
ವ್ಯವಸ್ಥಿತ ಸಂಯೋಜನೆಯಿಲ್ಲದೇ ನಡೆದ ಈ ಕಾರ್ಯಕ್ರಮದಲ್ಲಿ ದಿಢೀರ್ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿತ್ತು. ಈ ವೇಳೆ ಅನೇಕ ಬಾಲಕಿಯರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ಕುರಿತು ಬರೇಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನ್ವೇಂದ್ರ ಸಿಂಗ್ ಅವರು ತನಿಖೆ ನಡೆಸುವಂತೆ ಸಿಟಿ ಮ್ಯಾಜಿಸ್ಟ್ರೇಟ್ ರಾಜೀವ್ ಪಾಂಡೆ ಅವರಿಗೆ ಆದೇಶಿಸಿದ್ದರು.
ಸಿಟಿ ಮ್ಯಾಜಿಸ್ಟ್ರೇಟ್ ತನಿಖೆಯ ಆಧಾರದ ಮೇಲೆ ಮ್ಯಾರಥಾನ್ ಕಾರ್ಯಕ್ರಮದ ಸಂಘಟಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶ್ಫಾಕ್ ಸಕ್ಲೇನಿ ಸೇರಿದಂತೆ ಇತರರ ವಿರುದ್ಧ ಕೋವಿಡ್ ಮಾರ್ಗಸೂಚಿಗಳು ಮತ್ತು ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 188, 269, 279, 3 ರ ಅಡಿ ಪ್ರಕರಣ ದಾಖಲಾಗಿದೆ.
ಓದಿ: 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ'..ಮಹಿಳಾ ಕಾಂಗ್ರೆಸ್ ಮ್ಯಾರಥಾನ್ನಲ್ಲಿ ಕಾಲ್ತುಳಿತ.. ಬಾಲಕಿಯರಿಗೆ ಗಾಯ!