ಉನ್ನಾವ( ಉತ್ತರ ಪ್ರದೇಶ): ನಮಗೆ ನ್ಯಾಯ ಸಿಗುವವರೆಗೂ ನಾವು ನಮ್ಮ ಮಗಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿರುವ ಘಟನೆ ಬಿಹಾರ ಪೊಲೀಸ್ ಠಾಣಾ ವ್ಯಾಪ್ತಿಯ ತಾಜ್‌ಪುರ ಗ್ರಾಮದಲ್ಲಿ ಕಂಡು ಬಂತು.
ಘಟನೆ ವಿವರ
ಫೆಬ್ರವರಿ 13 ರಂದು ತಾಜ್‌ಪುರ ಗ್ರಾಮದ ರಾಮನಂದನ್ ಅವರ 20 ವರ್ಷದ ಮಗಳು ಅಂಜು ಅಲಿಯಾಸ್ ಗೋಲಾನಾ ನಾಪತ್ತೆಯಾಗಿದ್ದರು. ಈ ಘಟನೆ ಬಗ್ಗೆ ಬಿಹಾರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದರು.
ಬುಧವಾರ ಸಂಜೆ ಗ್ರಾಮದ ಹೊರವಲಯದಲ್ಲಿರುವ ಲೋನ್ ನದಿಯ ತಟದಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಮೃತ ಯುವತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ನೀರಿನಲ್ಲಿ ಮುಳುಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮರಣೋತ್ತರ ಪರೀಕ್ಷೆಯ ವರದಿ ನೀಡಿದ್ದಾರೆ.
ಬಳಿಕ ಮೃತ ಯುವತಿಯ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಆದ್ರೆ ಕುಟುಂಬಸ್ಥರು ಆಕೆಯ ಅಂತ್ಯಕ್ರಿಯೆ ಮಾಡದೇ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಗ್ರಾಮದ ಇಬ್ಬರು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಮೃತ ಯುವತಿಯ ಕುಟುಂಬಸ್ಥರು ಆಗ್ರಹಿಸಿದರು.
ರಾಜಕೀಯಕ್ಕೆ ತಿರುಗಿದ ಪ್ರಕರಣ
ಮತ್ತೊಂದೆಡೆ ಇಡೀ ಘಟನೆಗೆ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಸಮಾಜವಾದಿ ಪಕ್ಷದ ಪ್ರಾದೇಶಿಕ ಮುಖಂಡರು ಮತ್ತು ಭಾರತೀಯ ಜನತಾ ಪಕ್ಷದ ಮುಖಂಡರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇಡೀ ಘಟನೆಗೆ ರಾಜಕೀಯ ಬಣ್ಣ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಇನ್ನು ಮೃತ ಯುವತಿ ಕುಟುಂಬಸ್ಥರಿಗೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದರು. ಬಳಿಕ ಕುಟುಂಬವು ಶುಕ್ರವಾರ ಬೆಳಿಗ್ಗೆ ಅಂತಿಮ ವಿಧಿಗಳ ಪ್ರಕಾರ ಯುವತಿಯ ಅಂತ್ಯಸಂಸ್ಕಾರ ಮಾಡಿತು.