ಹೈದರಾಬಾದ್ : ಪರಿಶೀಲನೆ ವೇಳೆ ನಿಯಂತ್ರಣ ತಪ್ಪಿ ಕಾರೊಂದು ಶೋರಂನ ಮೊದಲ ಮಹಡಿಯಿಂದ ಹೊರ ಹೋಗಿ ಮತ್ತೊಂದು ಕಾರಿನ ಮೇಲೆ ಪಲ್ಟಿಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಎಲ್‌ಬಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರಿ ಜಂಕ್ಷನ್‌ನಲ್ಲಿರುವ ಟಾಟಾ ಮೋಟಾರ್ ಶೋ ರೂಂನಲ್ಲಿ ನಡೆದ ಈ ಅವಾಂತರದಲ್ಲಿ ಕಾರು ಖರೀದಿಸಲು ಬಂದಿದ್ದ ವ್ಯಕ್ತಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಟಾಟಾ ಮೋಟಾರ್ಸ್ ಕಾರ್ ಶೋ ರೂಂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಶೋ ರೂಂನ ಮೊದಲ ಮಹಡಿಯಲ್ಲಿ ಕಾರು ಖರೀದಿಸಲು ಬಂದ ಗ್ರಾಹಕರಿಗೆ ವಾಹನದ ಬಗ್ಗೆ ವಿವರಣೆ ನೀಡಲಾಗುತ್ತಿತ್ತು. ಈ ವೇಳೆ ಗ್ರಾಹಕ ಕಾರನ್ನು ಸ್ಟಾರ್ಟ್ ಮಾಡುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಮೊದಲ ಮಹಡಿಯ ಲಿಫ್ಟ್‌ನ ಮೇಲ್ಭಾಗದಿಂದ ಕೆಳಗಿರುವ ಮತ್ತೊಂದು ಕಾರಿನ ಮೇಲೆ ಬಿದ್ದಿದೆ.
ಕಾರಿನಲ್ಲಿದ್ದ ಗ್ರಾಹಕನಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಹೊರ ಕಾರು ಬಿದ್ದ ಪರಿಣಾಮ ಸ್ವಲ್ಪ ಕಾಲ ಅಲ್ಲಿನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ತೆರವುಗೊಳಿಸಿದ್ದಾರೆ.