ಕೋಟಾ(ರಾಜಸ್ಥಾನ): ಎರಡು ವರ್ಷದ ಪುಟ್ಟ ಬಾಲಕಿ ತಲೆ ಮೇಲೆ ಕಾರು ಹರಿದು ಹೋಗಿರುವ ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ರಾಜಸ್ಥಾನದ ಜವಾಹರ್ನಗರ ಪೊಲೀಸ್ ಠಾಣಾ ಪ್ರದೇಶದಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜವಾಹರ್ನಗರದ ಸಂಸ್ಕಾರ ರೆಸಿಡೆನ್ಸಿ ಹಾಸ್ಟೆಲ್ನಲ್ಲಿ ಅಮೃತಲಾಲ್ ಮೀನಾ ಎಂಬ ಮಹಿಳೆ ಕೆಲಸ ಮಾಡುತ್ತಿದ್ದು, ಆಕೆಯ ಜತೆ 2 ವರ್ಷದ ಮಗು ಆರೋಹಿ ಇದ್ದಳು. ಇಂದು ಬೆಳಗ್ಗೆ 10 ಗಂಟೆಗೆ ಹಾಸ್ಟೆಲ್ ಹೊರಗಡೆ ಮಗು ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಬಂದಿರುವ ಕಾರು ಮಗುವಿನ ಮೈಮೇಲೆ ಹರಿದಿದೆ. ಪುಟ್ಟ ಮಗುವಿನ ತಲೆ ಮೇಲೆ ಕಾರಿನ ಚಕ್ರ ಹರಿದು ಹೋಗಿದ್ದು ಪುಟಾಣಿ ಸ್ಥಳದಲ್ಲೇ ಸಾವನ್ನಪ್ಪಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಹಾವು ಕಚ್ಚಿರುವುದನ್ನು ಮನೆಯಲ್ಲಿ ಹೇಳಲಿಲ್ಲ.. ಹುಟ್ಟುಹಬ್ಬದಂದೇ ಪ್ರಾಣಬಿಟ್ಟ 8 ವರ್ಷದ ಬಾಲಕಿ
ಘಟನೆ ನಡೆಯುತ್ತಿದ್ದಂತೆ ಮಗುವಿನ ರಕ್ಷಣೆಗೆ ತಾಯಿ ಓಡೋಡಿ ಬಂದಿದ್ದಾಳೆ. ಇದೇ ವೇಳೆ ಹೆಚ್ಚಿನ ಪ್ರಮಾಣದ ಜನರು ಅಲ್ಲಿ ಜಮಾಯಿಸಿದರು. ಅದಾಗಲೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಅಧಿಕಾರಿ ರಾಮ್ಕಿಶನ್, ಡ್ರೈವರ್ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಈಗಾಗಲೇ ಆತನ ವಿರುದ್ಧ ಪ್ರಕರಣ ದಾಖಲಿಸಿ ಶೋಧ ನಡೆಸುತ್ತಿದ್ದೇವೆ ಎಂದರು.