ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ತಿಂಗಳು ಈ ವಿಲೀನ ಪ್ರಕ್ರಿಯೆ ನಡೆಯಬಹುದು ಎನ್ನಲಾಗಿದೆ.ಸದ್ಯ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು, ಮುಂದಿನ ವಾರ ಭಾರತಕ್ಕೆ ಮರಳಲಿದ್ದಾರೆ. ಇದರ ನಂತರ ಪಕ್ಷದ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ಗೆ ದೊಡ್ಡ ಹುದ್ದೆ ಸಿಗುವ ಸಾಧ್ಯತೆ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಿದ ನಂತರ ಅವರಿಗೆ ಬಿಜೆಪಿಯಲ್ಲಿ ದೊಡ್ಡ ಹುದ್ದೆಗಳನ್ನು ನೀಡುವ ಸಾಧ್ಯತೆ ಇದೆ. ಅದರಲ್ಲೂ 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ, ಪಂಜಾಬ್‌ನ 13 ಲೋಕಸಭಾ ಸ್ಥಾನಗಳಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡುತ್ತಿದೆ.
2022 ರ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕ ಪಕ್ಷವಾಗಿ ಹೋರಾಡಿದ್ದರು ಕ್ಯಾಪ್ಟನ್: ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2022 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪ್ರತ್ಯೇಕ ಪಕ್ಷವಾಗಿ ಸ್ಪರ್ಧಿಸಿದ್ದರು. ಆದರೆ, ಆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಯಾವುದೇ ಸಫಲತೆ ಸಿಗಲಿಲ್ಲ ಹಾಗೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವತಃ ಚುನಾವಣೆಯಲ್ಲಿ ಸೋತಿದ್ದು ಇತಿಹಾಸ.
ಬಿಜೆಪಿ ಸನಿಹಕ್ಕೆ ಬಂದ ಹಲವು ಕಾಂಗ್ರೆಸಿಗರು: ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದ ನಂತರ ಇನ್ನೂ ಹಲವಾರು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತಾದರೂ ಅಂಥ ಬೆಳವಣಿಗೆ ನಡೆಯಲಿಲ್ಲ.
ವಿಧಾನ ಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಶಾಸಕರಾದ ಫತೇ ಜಂಗ್ ಬಾಜ್ವಾ ಮತ್ತು ರಾಣಾ ಗುರ್ಮೀತ್ ಸೋಧಿ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಚುನಾವಣೆಯ ನಂತರ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಕೂಡ ಬಿಜೆಪಿ ಸೇರ್ಪಡೆಯಾದರು. ನಂತರ ಕಾಂಗ್ರೆಸ್‌ನ ಮಾಜಿ ಸಚಿವರಾದ ಗುರುಪ್ರೀತ್ ಕಂಗರ್, ಶಾಮ್ ಸುಂದರ್ ಅರೋರಾ, ರಾಜ್‌ಕುಮಾರ್ ವರ್ಕಾ ಮತ್ತು ಬಲ್ಬೀರ್ ಸಿಧು ಕೂಡ ಬಿಜೆಪಿ ಸೇರಿದರು.
2021ರಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದು, ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಹೈಕಮಾಂಡ್ ವಜಾಗೊಳಿಸಿತ್ತು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಸಿಂಗ್ ಕಾಂಗ್ರೆಸ್ ತೊರೆದು ಪ್ರತ್ಯೇಕ ಪಕ್ಷ ಸ್ಥಾಪಿಸಿದರು.
ಪ್ರಣೀತ್ ಕೌರ್ ಬಿಜೆಪಿ ಸೇರ್ಪಡೆ: ಕ್ಯಾಪ್ಟನ್ ಅಮರಿಂದರ್ ಅವರ ಪಕ್ಷ ಬಿಜೆಪಿಯಲ್ಲಿ ವಿಲೀನವಾದ ನಂತರ ಅವರ ಪತ್ನಿ ಸಂಸದೆ ಪ್ರಣೀತ್ ಕೌರ್ ಕೂಡ ಬಿಜೆಪಿ ಸೇರಬಹುದು ಎಂದು ತಿಳಿದು ಬಂದಿದೆ.
ಇದನ್ನು ಓದಿ:16 ಬಂಡಾಯ ಶಾಸಕರ ಅಮಾನತು ಕೋರಿ ಸುಪ್ರೀಂಗೆ ಶಿವಸೇನಾ ಅರ್ಜಿ