ಪಂಜಾಬ್: ಕಾಂಗ್ರೆಸ್ನಿಂದ ವಿರುದ್ಧ ಸಿಡಿದು ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ್ದಲ್ಲದೇ ಅವರೂ ಸೇರ್ಪಡೆಯಾಗಿದ್ದಾರೆ. ಸಿಂಗ್ ಜೊತೆಗೂಡಿ ಕೆಲ ಶಾಸಕರು, ನಾಯಕರು ಕೇಸರಿ ಧ್ವಜ ಹಿಡಿದರು.
ಇಂದು ಬಿಜೆಪಿ ಪಂಜಾಬ್ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಕಿರಣ್ ರಿಜಿಜು ಅವರ ಸಮ್ಮುಖದಲ್ಲಿ ಅಮರಿಂದರ್ ಸಿಂಗ್ ಅವರು ಔಪಚಾರಿಕವಾಗಿ ಬಿಜೆಪಿಗೆ ಸೇರಿದರು. ಇದಕ್ಕೂ ಮುನ್ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅಮರಿಂದರ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕಾನೂನು ಸಚಿವ ಕಿರಣ್ ರಿಜಿಜು ಮಾತನಾಡಿ, ಅಮರಿಂದರ್ ಸಿಂಗ್ ಪಕ್ಷ ಸೇರಿರುವುದನ್ನು ಶ್ಲಾಘಿಸಿ, ದೇಶದ ಬಗ್ಗೆ ಚಿಂತಿಸುವ ವ್ಯಕ್ತಿಗಳು ಒಂದೆಡೆ ಇರುವುದು ಉತ್ತಮ.
ಪಂಜಾಬ್‌ನಂತಹ ಸೂಕ್ಷ್ಮ ರಾಜ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸಿಂಗ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದರು. ಈ ಮೊದಲು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಮರಿಂದರ್ ಸಿಂಗ್ ಅವರು ಭೇಟಿ ಮಾಡಿದ ನಂತರ ಸಿಂಗ್ ಅವರು ಬಿಜೆಪಿ ಸೇರುವ ಘೋಷಣೆ ಮಾಡಿದ್ದರು.
ಪಂಜಾಬ್ ಬಿಜೆಪಿಗೆ ಹೊಸ ಕ್ಯಾಪ್ಟನ್: ಇನ್ನು ಬಿಜೆಪಿ ಸೇರಿದ ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಪಟ್ಟ ಕಟ್ಟಲಾಗಿದೆ. ಇವರದೊಂದಿಗೆ 7 ಮಾಜಿ ಶಾಸಕರು, ಸಂಸದ, ಮಾಜಿ ಸ್ಪೀಕರ್ ಕೂಡ ಬಿಜೆಪಿ ಸೇರ್ಪಡೆಯಾದರು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸುದೀರ್ಘ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದರೆ, ಪಂಜಾಬ್ನಲ್ಲಿ ಏಕ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತಂದ ಕೀರ್ತಿ ಇವರದಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಮಧ್ಯೆ ಗುದ್ದಾಟದಿಂದಾಗಿ ಸಿಎಂ ಪಟ್ಟ ಕಳೆದುಕೊಂಡಿದ್ದರು.
ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದಲೇ ಹೊರಬಂದು ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೂಡಿ ಹೊಸ ಪಕ್ಷದಡಿ ಚುನಾವಣೆಗೆ ನಿಂತು ಸೋತಿದ್ದರು. ಇದೀಗ ಮುಂದಿನ ರಾಜಿಕೀಯ ಜೀವನವನ್ನು ಬಿಜೆಪಿ ಜೊತೆ ಗುರುತಿಸಿಕೊಳ್ಳಲಿದ್ದಾರೆ.
ಬಿಜೆಪಿಗೆ ಲಾಭವಾಗ್ತಾರಾ ಅಮರಿಂದರ್ ಸಿಂಗ್: ಸಿಖ್ ಸಮುದಾಯದ ಅಮರಿಂದರ್ ಸಿಂಗ್ ಬಿಜೆಪಿ ಸೇರಿರುವುದು ಪಕ್ಷಕ್ಕೆ ಭಾರೀ ಲಾಭ ತಂದುಕೊಡುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿಗೆ ಹೊಸ ನಾಯಕನ ಆಗಮನದಿಂದ ಪಂಜಾಬ್ನಲ್ಲಿ ಪಕ್ಷವನ್ನು ಕಟ್ಟಲು ಸಿಂಗ್ ನೆರವಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಓದಿ: ಲಂಚ ಪ್ರಕರಣ: ಬಿಎಸ್ವೈ ಸಲ್ಲಿಸಿದ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್