ಕೋಲ್ಕತಾ: ಐಐಟಿ-ಖರಗ್‌ಪುರದ ವಿದ್ಯಾರ್ಥಿ ಫೈಜಾನ್ ಅಹ್ಮದ್ ಕಾಲೇಜು ಕ್ಯಾಂಪಸ್‌ನಲ್ಲಿ ರಾಗಿಂಗ್‌ಗೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಖಾರಗ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಿರ್ದೇಶಕರಿಗೆ ಕಲ್ಕತ್ತಾ ಹೈಕೋರ್ಟ್ ಛೀಮಾರಿ ಹಾಕಿದೆ.
ವಿಭಿನ್ನ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಗಳ ಅತ್ಯುನ್ನತ ಸಾಮರ್ಥ್ಯದ ಮಕ್ಕಳು ಇಲ್ಲಿಗೆ ಬಂದಿರುತ್ತಾರೆ. ಅವರು ಬೇರೆ ಹಿನ್ನೆಲೆಯ ವಿದ್ಯಾರ್ಥಿಗಳ ಜತೆ ಮುಕ್ತವಾಗಿ ಬೆರೆಯುವುದು ಸಾಧ್ಯವಾಗಲಾರದು ಎನ್ನುವುದನ್ನು ಐಐಟಿ ನಿರ್ದೇಶಕರು ತಿಳಿದಿರಬೇಕು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜತೆಗೆ, ಕಾಲೇಜಿನಲ್ಲಿನ ಕೌನ್ಸೆಲಿಂಗ್ ಅವಧಿಗಳು ಅತಿ ತಳಮಟ್ಟದವರೆಗೂ ತಲುಪಬೇಕು ಎಂದೂ ಇದೇ ವೇಳೆ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿಯೊಬ್ಬನ ಸಾವಿಗೆ ಕಾರಣವಾದ ರಾಗಿಂಗ್ ವಿರುದ್ಧದ ದೂರಿಗೆ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದ ನಿರ್ದೇಶಕರಿಗೆ ಡಿ. 1ರಂದು ಕೋರ್ಟ್ ವಾಗ್ದಂಡನೆ ಕೂಡಾ ವಿಧಿಸಿತ್ತು.
ಕೊಳೆತ ಸ್ಥಿತಿಯಲ್ಲಿ ಮೃತದೇಹ ಹಾಸ್ಟೆಲ್‌ನಲ್ಲಿ ಪತ್ತೆ: ರ‍್ಯಾಗಿಂಗ್ ಸಾವಿನ ಪ್ರಕರಣದ ಕುರಿತು ನಿರ್ದೇಶಕರು ಈ ಹಿಂದೆ ಸಲ್ಲಿಸಿದ್ದ ಸಾಮಾನ್ಯ ವರದಿಗೆ ಬದಲಾಗಿ, ಕೋರ್ಟ್‌ಗೆ ಶುಕ್ರವಾರ ವಿಸ್ತೃತ ವರದಿ ಸಲ್ಲಿಸಲಾಗಿದೆ. ಅಸ್ಸೋಂನ ಟಿನ್ಸುಕಿಯಾದ 23 ವರ್ಷದ ಫೈಜಾನ್ ಅಹ್ಮದ್ ಎಂಬ ವಿದ್ಯಾರ್ಥಿ ಮೃತದೇಹ ಹಾಸ್ಟೆಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿಯ ಸಾವಿಗೂ ಒಂದು ತಿಂಗಳ ಮುನ್ನ ರ‍್ಯಾಗಿಂಗ್ ಕುರಿತಂತೆ ಆತ ದೂರು ನೀಡಿದ್ದ. ಈ ಬಗ್ಗೆ ತೆಗೆದುಕೊಂಡಿದ್ದ ಕ್ರಮದ ಬಗ್ಗೆ ಕಾಲೇಜು ಸಲ್ಲಿಸಿದ್ದ ಪೇಲವ ವರದಿಯ ವಿರುದ್ಧ ಕೋರ್ಟ್ ಕಿಡಿಕಾರಿತ್ತು.
ನಡೆದಿರುವ ಘಟನೆ ಆಘಾತಕಾರಿಯಾಗಿದೆ: 'ನನ್ನ ಎಲ್ಲ ವಿದ್ಯಾರ್ಥಿಗಳನ್ನೂ ನನ್ನ ಮಗ ಅಥವಾ ಮಗಳು ಎಂದೇ ನಾನು ಕರೆಯುತ್ತೇನೆ. ಇದನ್ನು ನಾನು ಪ್ರತಿಯೊಬ್ಬರಿಗೂ ತಿಳಿಸಿದ್ದೇನೆ. ನಡೆದಿರುವ ಘಟನೆ ಆಘಾತಕಾರಿಯಾಗಿದೆ. ಕಠಿಣ ಕ್ರಮಕ್ಕೆ ಕೋರ್ಟ್ ಆದೇಶಿಸಿದೆ. ಅದನ್ನು ನಡೆಸಲಾಗುತ್ತದೆ. ಇದರಲ್ಲಿ ಯಾವ ಲೋಪವೂ ಇಲ್ಲ' ಎಂದು ಐಐಟಿ ಖಾರಗ್‌ಪುರ ನಿರ್ದೇಶಕ ವೀರೇಂದ್ರ ತಿವಾರಿ ಹೇಳಿದ್ದಾರೆ.
ಘಟನೆಯನ್ನು ನಿರ್ವಹಿಸಿದ ರೀತಿ ಹಾಗೂ ಮೃತ ವಿದ್ಯಾರ್ಥಿಯ ಪೋಷಕರು ಎತ್ತಿರುವ ಪ್ರಶ್ನೆಗಳ ವಿಚಾರವಾಗಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ಒಂದು ಪ್ರತಿಷ್ಠಿತ ಸಂಸ್ಥೆಯ ಮುಖ್ಯಸ್ಥರು ನಡೆದುಕೊಳ್ಳುವ ರೀತಿಯೇ ಇದು? ನಿಮಗೆ ಮಕ್ಕಳಿದ್ದಾರೆಯೇ? ಎಂದೂ ಕಟುವಾಗಿಯೇ ಪ್ರಶ್ನಿಸಿತು. ಇದಕ್ಕೆ ಪ್ರತಿಯಾಗಿ ಹೌದು, ನನಗೆ ಇಬ್ಬರು ಗಂಡುಮಕ್ಕಳಿದ್ದಾರೆ ಎಂದು ಅವರು ಉತ್ತರ ಕೂಡಾ ನೀಡಿದ್ದಾರೆ. ಯುವಕನ ಪೋಷಕರು ತೀರಾ ಬಡವರಾಗಿದ್ದು, ಕೋರ್ಟ್‌ಗೆ ಬರಲು ಕೂಡ ಅವರ ಬಳಿ ಹಣವಿಲ್ಲ ಎಂಬುದನ್ನು ಪೀಠ ವಿಚಾರಣೆಗೆ ವೇಳೆ ಪ್ರಸ್ತಾಪಿಸಿದೆ.
ಈ ಎಲ್ಲ ಗದ್ದಲಗಳ ನಡುವೆ ಜಪಾನ್‌ನ ಟೋಕಿಯೋಗೆ ಪ್ರವಾಸ ಕೈಗೊಳ್ಳಲು ಮುಂದಾಗಿದ್ದ ನಿರ್ದೇಶಕರಿಗೆ ಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿತು. ಯಾವುದು ಹೆಚ್ಚು ಮುಖ್ಯ? ಹೈಕೋರ್ಟ್ ಎದುರು ಹಾಜರಾಗುವುದೇ ಅಥವಾ ಟೋಕಿಯೋಗೆ ಹೋಗುವುದೇ? ಎಂದು ನಿರ್ದೇಶಕರನ್ನು ಪ್ರಶ್ನಿಸಿತು.
ಕಾಲೇಜು ಮಂಡಳಿ ವಿರುದ್ಧ ಅನುಮಾನ: ಮೂರನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಫೈಜಾನ್ ಅಹ್ಮದ್ ಸಾವು, ಕೊಲೆಯ ಪ್ರಕರಣ ಎನ್ನುವುದು ಸ್ಪಷ್ಟವಾಗಿದೆ. ಅಧಿಕಾರಿಗಳಿಗೆ ದೂರು ನೀಡಿದ್ದರೂ ಆತನ ಮೇಲೆ ರ‍್ಯಾಗಿಂಗ್ ನಡೆಸಲಾಗುತ್ತಿತ್ತು ಎಂದು ಪೋಷಕರು ಇದೇ ವೇಳೆ ಆರೋಪಿಸಿದ್ದಾರೆ. ಕಳೆದ ವರ್ಷದ ಅ. 14ರಂದು ಫೈಜಾನ್‌ನ ದೇಹ ಹಾಸ್ಟೆಲ್ ಕೊಠಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಘಟನೆ ನಡೆದಿರುವ ರೀತಿ ಅನೇಕ ಅನುಮಾನಗಳನ್ನು ಮೂಡಿಸಿದೆ. ಫೈಜಾನ್‌ಗೆ ನೀಡಲಾಗಿದ್ದ ಹಾಸ್ಟೆಲ್ ಬದಲು ಬೇರೆ ಹಾಸ್ಟೆಲ್‌ನಲ್ಲಿ ಆತನ ಶವ ಸಿಕ್ಕಿದ್ದು, ಅಲ್ಲದೆ ಅದು ಕೊಳೆಯುವವರೆಗೂ ಯಾರಿಗೂ ಗೊತ್ತಾಗದೆ ಹೋಗಿರುವುದು ಹೇಗೆ ಸಾಧ್ಯ? ಎಂದು ಪೋಷಕರ ಪರ ವಕೀಲರು ಪ್ರಶ್ನಿಸಿದ್ದಾರೆ.
ಓದಿ: ಮಕ್ಕಳಾಗಲಿಲ್ಲ ಎಂದು ಚಿತಾಭಸ್ಮ ತಿನ್ನಿಸಿದ ದುರುಳರು: ಕುಟುಂಬಸ್ಥರಿಂದಲೇ ಮಹಿಳೆಗೆ ವಾಮಾಚಾರ!