ಪಾಟ್ನಾ(ಬಿಹಾರ): ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಜೊತೆಗಿನ ಮೈತ್ರಿ ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಒಟ್ಟು 31 ಶಾಸಕರು ಮಂತ್ರಿಗಳಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಹೆಚ್ಚಿನ ಸಚಿವ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಆಗಸ್ಟ್ 10ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ 'ಮಹಾಘಟಬಂಧನ್': ನಿತೀಶ್ ಕುಮಾರ್, ತೇಜಸ್ವಿ ಯಾದವ್ ಪ್ರಮಾಣವಚನ
ಆರ್ಜೆಡಿಯ 16 ಶಾಸಕರು, ಜೆಡಿಯುದಿಂದ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಪಡೆದರು. ಉಳಿದಂತೆ ಕಾಂಗ್ರೆಸ್ನ ಇಬ್ಬರು ಹಾಗೂ ಹಿಂದೂಸ್ತಾನ ಅವಾನಿ ಮೋರ್ಚಾದ ಓರ್ವ ಶಾಸಕನಿಗೆ ಮಂತ್ರಿಭಾಗ್ಯ ಸಿಕ್ಕಿದೆ. ಲಾಲೂ ಪ್ರಸಾದ್ ಯಾದವ್ ಅವರ ಇನ್ನೋರ್ವ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನೂತನ ಸಚಿವರೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಮೊದಲ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಗೃಹ ಖಾತೆ ನಿತೀಶ್ ಕುಮಾರ್ ಬಳಿಯಿದೆ.
ನೂತನ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಶಾಸಕರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಓರ್ವ ಮುಸ್ಲಿಂ ಶಾಸಕಿ ಸೇರಿದಂತೆ ಐವರು ಮುಸ್ಲಿಮರು ಹಾಗು ದಲಿತರಿಗೂ ಸಚಿವ ಸ್ಥಾನ ದೊರೆತಿದೆ.