ನವದೆಹಲಿ: ಕೋವಿಡ್ ಹಿನ್ನೆಲೆ ದೇಶದ ಬಡವರಿಗೆ ಉಚಿತ ಪಡಿತರ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಇದೀಗ ಈ ಯೋಜನೆಯ ಅವಧಿಯನ್ನ ಇನ್ನಷ್ಟು ವಿಸ್ತರಿಸಿದೆ. ಇದೀಗ ನವೆಂಬರ್ ಅಂತ್ಯದವರೆಗೂ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ತಿಂಗಳು ವಿಸ್ತರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಈ ಮೊದಲು ಈ ಯೋಜನೆಯನ್ನು ಜೂನ್ ಅಂತ್ಯದವರೆಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಇನ್ನೂ 5 ತಿಂಗಳ ಕಾಲ ಉಚಿತ ಪಡಿತರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಇದೀಗ ಈ ಪ್ರಸ್ತಾಪವನ್ನು ಕೇಂದ್ರ ಕ್ಯಾಬಿನೆಟ್ ಅಂಗೀಕರಿಸಿದೆ.
ಈ ತಿಂಗಳ ಆರಂಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಪಿಎಂಜಿಕೆಎವೈ ಯೋಜನೆಯಲ್ಲಿ ದೀಪಾವಳಿವರೆಗೂ ದೇಶವಾಸಿಗಳಿಗೆ ಉಚಿತ ಪಡಿತರ ನೀಡುವುದಾಗಿ ಘೋಷಿಸಿದ್ದರು. ಈಗ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ನವೆಂಬರ್ ವರೆಗೂ ಆಹಾರ ಧಾನ್ಯ ವಿತರಿಸಲಾಗುವುದು ಎಂದು ಅಧಿಕೃತವಾಗಿ ತಿಳಿಸಿದೆ.
ಆಹಾರ ವಿತರಣೆ ಹಾಗೂ ಈ ನೆರವಿನಿಂದಾಗಿ ಕೊರೊನಾದಿಂದ ಬಡ ವರ್ಗ ಎದುರಿಸುತ್ತಿರುವ ಅಡ್ಡಿಗಳ ನಿವಾರಿಸಲಾಗುತ್ತದೆ. ಮುಂದಿನ 5 ತಿಂಗಳು ಆಹಾರ ಧಾನ್ಯದ ಕೊರತೆ ಎದುರಾಗದು. ಆಹಾರ ಭದ್ರತಾ ಕಾಯ್ದೆಯಡಿ ಬರುವ ಪ್ರತೀ ಕುಟುಂಬವು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಈ ಯೋಜನೆಗಾಗಿ ಒಟ್ಟು 64,031 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಈ ಸಂಪೂರ್ಣ ವೆಚ್ಚವನ್ನು ರಾಜ್ಯಗಳ ಸಹಕಾರವಿಲ್ಲದೇ ಕೇಂದ್ರವೇ ಭರಿಸಲಿದೆ. ಈ ಯೋಜನಾ ಅವಧಿಯಲ್ಲಿ ಒಟ್ಟು 204 ಲಕ್ಷ ಟನ್ ಆಹಾರ ಧಾನ್ಯ ವಿತರಣೆಯಾಗಲಿದೆ ಎಂದು ತಿಳಿಸಿದೆ.
ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ರೈಲ್ಸೈಡ್ ವೇರ್‌ಹೌಸ್ ಕಂಪನಿ ವಿಲೀನ
ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ರೈಲ್ಸೈಡ್ ವೇರ್‌ಹೌಸ್ ಕಂಪನಿ ಲಿಮಿಟೆಡ್ (ಸಿಆರ್‌ಡಬ್ಲ್ಯುಸಿ) ಅನ್ನು ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (ಸಿಡಬ್ಲ್ಯೂಸಿ) ಯೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ. 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಧ್ಯೇಯದಡಿ ಈ ವಲಯವನ್ನು ವಿಲೀನಗೊಳಿಸಲಾಗಿದೆ.
ವ್ಯಾಪಾರ ಸುಲಭತೆಯನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್‌ಯು) ಖಾಸಗಿ ವಲಯದ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶವನ್ನು ಈ ನಿರ್ಧಾರ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿಆರ್‌ಡಬ್ಲ್ಯುಸಿ 2007ರಲ್ಲಿ ಕಂಪನಿ ಕಾಯ್ದೆ 1956 ರ ಅಡಿ ಸಂಯೋಜಿಸಲ್ಪಟ್ಟ ಮಿನಿ - ರತ್ನ ವರ್ಗ -2 ಕೇಂದ್ರ ಸಾರ್ವಜನಿಕ ವಲಯ ಉದ್ಯಮಗಳು (ಸಿಪಿಎಸ್‌ಇ) ಆಗಿದ್ದರೆ, ಸಿಡಬ್ಲ್ಯೂಸಿ ಮಿನಿ-ರತ್ನ ವರ್ಗ -1 ಸಿಪಿಎಸ್‌ಇ ಆಗಿದೆ.
ವಿಲೀನವು ಎರಡೂ ಕಂಪನಿಗಳ (ಅಂದರೆ ಉಗ್ರಾಣ, ನಿರ್ವಹಣೆ, ಸಾರಿಗೆ) ಒಂದೇ ಆಡಳಿತದ ಮೂಲಕ ದಕ್ಷತೆ, ಗರಿಷ್ಠ ಸಾಮರ್ಥ್ಯದ ಬಳಕೆ, ಪಾರದರ್ಶಕತೆ, ಹೊಣೆಗಾರಿಕೆಯನ್ನು ಉತ್ತೇಜಿಸಲು, ಆರ್ಥಿಕ ಉಳಿತಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಹೊಸ ಗೋದಾಮಿನ ಸಾಮರ್ಥ್ಯಕ್ಕಾಗಿ ರೈಲ್ವೆ ಸೈಡಿಂಗ್ ಅನ್ನು ಏಕೀಕರಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.