ಬಕ್ಸರ್(ಬಿಹಾರ): ಬರೋಬ್ಬರಿ 12 ವರ್ಷಗಳ ಹಿಂದೆ ಮನೆಯಿಂದ ಹಠಾತ್ ಆಗಿ ನಾಪತ್ತೆಯಾಗಿದ್ದ ಮಗನೋರ್ವ ಇದೀಗ ಮನೆಗೆ ವಾಪಸ್ ಆಗುತ್ತಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಹಾರದ ಬಕ್ಸರ್ ಜಿಲ್ಲೆಯ ಛಾವಿ ಮುಶಾರ್ನಲ್ಲಿ ನಡೆದ ಘಟನೆ ಇದಾಗಿದೆ. ಯುವಕನನ್ನು ಕರೆತರಲು ಬಕ್ಸರ್ ಪೊಲೀಸರ ತಂಡ ಪಂಜಾಬ್ನ ಗುರುದಾಸ್ ಪುರಕ್ಕೆ ತೆರಳಿದ್ದಾರೆ.
ಏನಿದು ಪ್ರಕರಣ?: ಮುಫಿಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಖಿಲಾಫತ್ಪುರ ಗ್ರಾಮದ ಛಾವಿ ಮುಸಾಹರ್ 12 ವರ್ಷಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ವೇಳೆ ಸಂಬಂಧಿಕರು ಸಾಕಷ್ಟು ಹುಡುಕಾಡಿದ್ರೂ ಆತ ಪತ್ತೆಯಾಗಿರಲಿಲ್ಲ. ಹೀಗಾಗಿ ಆತ ಸಾವನ್ನಪ್ಪಿದ್ದಾನೆಂದು ಪರಿಗಣಿಸಿ, ಅಂತಿಮ ವಿಧಿವಿಧಾನ ನಡೆಸಿದ್ದರು. ಆದರೆ, ಕಳೆದ ವರ್ಷ ಡಿಸೆಂಬರ್ನಲ್ಲಿ ಯುವಕನೋರ್ವ ದಾರಿ ತಪ್ಪಿ ಪಾಕಿಸ್ತಾನ ತಲುಪಿರುವ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿತ್ತು. ಪಾಕಿಸ್ತಾನ ಆತನನ್ನು ಬಂಧನ ಮಾಡಿ ಕರಾಚಿ ಜೈಲಿನಲ್ಲಿ ಇರಿಸಿತ್ತು. ಇದಾದ ಬಳಿಕ ಆತನನ್ನು ಭಾರತಕ್ಕೆ ಕರೆತರಲುವ ಕೆಲಸ ಶುರುವಾಗಿತ್ತು. ತನ್ನ ಮಗ ಜೀವಂತವಾಗಿದ್ದಾನೆಂಬ ಮಾಹಿತಿ ತಿಳಿಯುತ್ತಿದ್ದಂತೆ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ಇದನ್ನೂ ಓದಿ: ನೆರೆ ಮನೆ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ, ಗರ್ಭಿಣಿ: ಕೇಸು ಮುಚ್ಚಿ ಹಾಕಲು ಪಂಚಾಯ್ತಿ!
ಅಟ್ಟಾರಿ ಗಡಿ ಮೂಲಕ ವಾಪಸ್: ಪಾಕ್ ಜೈಲಿನಲ್ಲಿದ್ದ ಮುಸಾಹರ್ನನ್ನು ಪಾಕ್ ಈಗಾಗಲೇ ಭಾರತದ ಬಿಎಸ್ಎಫ್ಗೆ ಹಸ್ತಾಂತರ ಮಾಡಿದೆ. ಹೀಗಾಗಿ ಬಿಹಾರ ಪೊಲೀಸರು ಆತನನ್ನ ಕರೆತರಲು ಗುರುದಾಸ್ಪುರಕ್ಕೆ ತೆರಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೃತ್ತಿ ದೇವಿ, ನನ್ನ ಮಗ ಸಿಗದ ಕಾರಣ ಆತ ಸಾವನ್ನಪ್ಪಿದ್ದಾನೆಂದು ಭರವಸೆ ಕೈಬಿಟ್ಟಿದೆ. ಜೊತೆಗೆ ಅಂತ್ಯಸಂಸ್ಕಾರ ಸಹ ಮಾಡಿದ್ದೇವು. ಆದರೆ, ಆತ ದಾರಿ ತಪ್ಪಿ ಪಾಕಿಸ್ತಾನಕ್ಕೆ ಹೋಗಿರುವ ವಿಷಯ ಗೊತ್ತಾಗಿದ್ದು, ಇದೀಗ ಹಿಂತಿರುಗುತ್ತಿದ್ದಾನೆ ಎಂದಿದ್ದಾರೆ.
ಮುಸಾಹರ್ಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಸಹ ಇದೆ. ಆದರೆ, ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಗಂಡ ವಾಪಸ್ ಬಾರದ ಕಾರಣ ಈತನ ಹೆಂಡತಿ ಮಗುವಿನೊಂದಿಗೆ ತವರು ಮನೆಯಲ್ಲಿ ಉಳಿದುಕೊಂಡಿದ್ದಾಳೆ.