ನವದೆಹಲಿ: ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸರ್ಕಾರದ ಅವಧಿಯಲ್ಲಿ 5ನೇ ಬಾರಿಗೆ ಇಂದು ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಇಂದಿನ ಬಜೆಟ್ ಮೇಲೆ ಇಡೀ ದೇಶವಲ್ಲ, ವಿಶ್ವವೇ ಗಮನ ನೆಟ್ಟಿತ್ತು. ಇದೇ ವೇಳೆ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಶೇಷ ದಿರಿಸು ಕೂಡಾ ಗಮನ ಸೆಳೆಯಿತು.
2019ರ ಕೇಂದ್ರ ಬಜೆಟ್ ಅವಧಿಯಿಂದ 2023ರವರೆಗೆ ನಿರ್ಮಲಾ ಸೀತಾರಾಮನ್ ಧರಿಸಿದ್ದ ಸೀರೆಗಳು ಚರ್ಚೆಯಲ್ಲಿರುವುದು ವಿಶೇಷ. ಇಂದು ಸಚಿವೆ ಕೆಂಪು ಬಣ್ಣದ ಕಾಟನ್ ಸೀರೆ ಧರಿಸಿದ್ದರು. ಇದಕ್ಕೆ ಕಂದು ಮತ್ತು ಬಂಗಾರ ಬಣ್ಣದ ಬಾರ್ಡರ್ ಇತ್ತು. ನಿರ್ಮಲಾ ಸೀತಾರಾಮನ್ 2019ರಲ್ಲಿ ಮೊದಲ ಬಜೆಟ್ ಮಂಡಿಸಿದ್ದರು. ಆಗ ಅವರು ಧರಿಸಿದ್ದು ಕಡು ಗುಲಾಬಿ ಬಣ್ಣದ ಮಂಗಳಗಿರಿ ಸೀರೆ. ಈ ಸೀರೆ ಕೂಡ ಗೋಲ್ಡನ್ ಬಾರ್ಡರ್ನಿಂದ ಕೂಡಿತ್ತು.
2020ರಲ್ಲಿ ಹಳದಿ ಬಣ್ಣದ ಕಾಂಜೀವರಂ ರೇಷ್ಮೆ ಸೀರೆ ಉಟ್ಟಿದ್ದರು. ಈ ಸೀರೆಯ ಅಂಚಿನಲ್ಲಿ ಬಂಗಾರದ ಬಣ್ಣದ ಬಾರ್ಡರ್ ಇತ್ತು. ಆ ವರ್ಷ ಜ.29 ರಂದು ಬಸಂತ್ ಪಂಚಮಿ ಹಬ್ಬ ಆಚರಿಸಲಾಗಿತ್ತು. ಬಸಂತ್ ಪಂಚಮಿ ಹಬ್ಬದ ಎರಡು ದಿನಗಳ ಬಳಿಕ ಹಣಕಾಸು ಸಚಿವರು ಹಳದಿ ಸೀರೆಯುಟ್ಟು ಬಜೆಟ್ ಮಂಡಿಸಿದ್ದರು. ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ವಿಶೇಷ ವ್ಯಾಮೋಹವಿರುತ್ತದೆ. ಅದರಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಕೆಂಪು ಅದೃಷ್ಟದ ಬಣ್ಣವಿರಬೇಕು ಅನಿಸುತ್ತದೆ. ಸಚಿವೆ ಕೆಲವು ಮಹತ್ವದ ಕಾರ್ಯಕ್ರಮ ಹಾಗೂ ದಿನಗಳಲ್ಲಿಯೂ ಕೆಂಪು ಬಣ್ಣವಿರುವ ಸೀರೆಯನ್ನೇ ಹೆಚ್ಚಾಗಿ ಧರಿಸಿರುತ್ತಾರೆ ಎಂಬ ಮಾಹಿತಿ ಇದೆ.
2021ರ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಬಂಗಾಳದ ಪ್ರಸಿದ್ಧ ಪೋಚಂಪಲ್ಲಿ ಸೀರೆ ಧರಿಸಿದ್ದರು. ಈ ಸೀರೆಯು ಶ್ವೇತ ಬಣ್ಣದ್ದಾಗಿತ್ತು. ಕೆಂಪು ಮುದ್ರಿತ ಅಂಚುಗಳಿದ್ದವು. ಬಂಗಾಳದ ಲಾಲ್ ಪಾಡ್ ಸೀರೆ ಕೂಡಾ ವಿಶೇಷತೆ ಹೊಂದಿದೆ. ಈ ಸೀರೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಅದರ ಮೇಲಿರುವ ಅಗಲವಾದ ಕೆಂಪು ಅಂಚುಗಳು ವಿಭಿನ್ನ ಲುಕ್ ನೀಡುತ್ತದೆ.
2022ರ ಬಜೆಟ್ ವೇಳೆ, ಕಾಫಿ ಬಣ್ಣದ ಸೀರೆಯುಟ್ಟಿದ್ದರು. ಈ ಸೀರೆಯ ಮೇಲೆ ಚಿನ್ನದ ಗೆರೆಗಳಿದ್ದವು. ಇದನ್ನು ಸೋನ್ಪುರಿ ಸೀರೆ ಎಂದೂ ಕರೆಯುತ್ತಾರೆ. ಕೈಮಗ್ಗದ ರೇಷ್ಮೆ ಸೀರೆ ಇದಾಗಿದ್ದು ಕಡು ಮೆರೂನ್ ಬಣ್ಣದ ಪಲ್ಲ ಹಾಗೂ ಕುಪ್ಪಸ ಇರುತ್ತದೆ. ಈ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್ ಆಕರ್ಷಕವಾಗಿ ಕಾಣುತ್ತಿದ್ದರು.