ಹೈದರಾಬಾದ್ : ಕೇಂದ್ರ ಸರ್ಕಾರದಿಂದ 2021-22ರ ಹಣಕಾಸು ಬಜೆಟ್ ಮಂಡಿಸಲು ಕೆಲವೇ ಕೆಲವು ತಿಂಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹೊಸ ಸವಾಲುಗಳು ಎದುರಾಗಲಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಣಕಾಸು ಆಯೋಗದ ಶಿಫಾರಸುಗಳನ್ನು ಬಜೆಟ್ನಲ್ಲಿ ಅಳವಡಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಲಿದೆ ಎಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ನ ವೈಸ್ ಚಾನ್ಸಲರ್ ಡಾ.ಎನ್.ಆರ್.ಭಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಈ ತಿಂಗಳ ಆರಂಭದಲ್ಲಿ 15 ಹಣಕಾಸು ಆಯೋಗ 2021-22ರಿಂದ 2025-26ರ ಅವಧಿಯಲ್ಲಿ ರಾಜ್ಯಗಳಿಗೆ ತೆರಿಗೆ ಹಂಚಿಕೆ, ರಾಜ್ಯಗಳಿಗೆ ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರಕ್ಕೆ ಅನುದಾನ, ವಿಪತ್ತು ನಿರ್ವಹಣಾ ಅನುದಾನ ಮುಂತಾದ ವಿಚಾರಗಳ ಬಗ್ಗೆ ಕೆಲವು ಶಿಫಾರಸುಗಳನ್ನು ರಾಷ್ಟ್ರಪತಿಗೆ ಸಲ್ಲಿಸಿತ್ತು. ಈ ವರದಿ ಇನ್ನೂ ಬಹಿರಂಗವಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ.ಎನ್.ಆರ್.ಭಾನುಮೂರ್ತಿ ಹಣಕಾಸು ಆಯೋಗದ ಶಿಫಾರಸುಗಳ ಬಗ್ಗೆ ಅಥವಾ ಆ ಶಿಫಾರಸುಗಳು ಕೇಂದ್ರ ಮತ್ತು ರಾಜ್ಯಗಳ ಹಣಕಾಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ನಮಗಿನ್ನೂ ತಿಳಿದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ ಹೇಗಿರಬೇಕು, ನೀವು ಕೂಡ ಮೋದಿ ಸರ್ಕಾರಕ್ಕೆ ಸಲಹೆ ನೀಡಬಹುದು.. ಅದಕ್ಕೆ ಹೀಗೆ ಮಾಡಿ..
ಆದರೆ, ಹಣಕಾಸು ಆಯೋಗದ ಶಿಫಾರಸುಗಳು ಹಣಕಾಸಿನ ಗುರಿಗಳನ್ನು ಸಾಧಿಸಲು ವಿಭಿನ್ನ ಚೌಕಟ್ಟು ಅಥವಾ ಮಾರ್ಗಸೂಚಿಗಳ ಮೇಲೆ ಬೆಳಕು ಚೆಲ್ಲುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಭಾನುಮೂರ್ತಿ ಹೇಳಿದ್ದಾರೆ.
ಅಲ್ಲದೆ, ಹಣಕಾಸು ಆಯೋಗವು ರಾಜ್ಯಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಹಂಚಿಕೆಯ ಬಗ್ಗೆ ಹೇಳುವ ಕಾರಣದಿಂದ ರಾಜ್ಯ ಬಜೆಟ್‌ಗಳು ಹಣಕಾಸು ಆಯೋಗದ ವರದಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.
ಐದು ಟ್ರಿಲಿಯನ್ ಆರ್ಥಿಕತೆಯ ಸೃಷ್ಟಿ
ಕೊರೊನಾ ವೈರಸ್ ಹಾವಳಿಯಿಂದಾಗಿ ಮಾರ್ಚ್ 25ರಿಂದ ಭಾರತವು ಸುಮಾರು ಮೂರು ತಿಂಗಳುಗಳವರೆಗೆ ಸಂಪೂರ್ಣ ಲಾಕ್‌ಡೌನ್ ಆಗಿತ್ತು. ಇದರಿಂದಾಗಿ ಏಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ 23.9%ರಷ್ಟು ಕಡಿಮೆಯಾಗಿದ್ದು, ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಿದೆ.
ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು, ಇಲ್ಲಿಯವರೆಗೆ 29.87 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಆದರೂ ಕೂಡಾ ಜಿಡಿಪಿ ಒಂದೇ ಅಂಕೆಯಲ್ಲಿದೆ.
ಇದನ್ನೂ ಓದಿ: ₹ 12,000 ಕೋಟಿಯಷ್ಟಿದ್ದ ಕೃಷಿ ಬಜೆಟ್ ₹ 1.34 ಲಕ್ಷ ಕೋಟಿಗೆ ಹೆಚ್ಚಿಸಿದ್ದೇವೆ: ಕೇಂದ್ರ ಸಚಿವ
ಈ ವರ್ಷದ ಬಜೆಟ್ ಮುಂದಿನ ಐದು ವರ್ಷಗಳಲ್ಲಿ ಆಗಬೇಕಾದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರಣದಿಂದ 2025-26ರ ಅವಧಿಯಲ್ಲಿ ಐದು ಟ್ರಿಲಿಯನ್ ಆರ್ಥಿಕತೆಯನ್ನು ಹೊಂದುವ ಭರವಸೆಯಿದೆ ಎಂದು ಭಾನುಮೂರ್ತಿ ಹೇಳಿದ್ದಾರೆ.
ಇದರ ಜೊತೆಗೆ ಮುಂದಿನ ಬಜೆಟ್ ಹಿಂದಿನ ಬಜೆಟ್ಗಿಂತ ದೊಡ್ಡ ಬಜೆಟ್ ಆಗಿರುತ್ತದೆ ಎಂದು ನಾನು ಭಾವಿಸುತ್ತೇನೆ. 2021-22ರ ಆರ್ಥಿಕ ವರ್ಷದಲ್ಲಿ ಕೋವಿಡ್ ನಂತರದ ಹಣಕಾಸಿನ ಪರಿಸ್ಥಿತಿ ತುಂಬಾ ಭಿನ್ನವಾಗಿರುತ್ತದೆ ಎಂದು ಭಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಉದ್ಯೋಗ ಸೃಷ್ಟಿಯೂ ಕೂಡಾ ಪ್ರಮುಖ ಸವಾಲು ಎಂದು ಭಾನುಮೂರ್ತಿ ಹೇಳಿದ್ದಾರೆ.