ಚಂಡೀಗಢ: ಪಂಜಾಬ್‌ನ ಅಮೃತಸರ ಜಿಲ್ಲೆಯ ಗಡಿಯೊಳಗೆ ಹಾರಿಬಂದ ಪಾಕಿಸ್ತಾನದ ಡ್ರೋನ್ ಒಂದನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಮಂಗಳವಾರ ಹೊಡೆದುರುಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ಕಳ್ಳಸಾಗಣೆ ಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ.
ಎರಡು ದಿನಗಳಲ್ಲಿ ಈ ಪ್ರದೇಶದಲ್ಲಿ ಇದು ಎರಡನೇ ಡ್ರೋನ್ ಅತಿಕ್ರಮಣವಾಗಿದೆ. ಅಮೃತಸರ ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಚಹರ್‌ಪುರ್ ಗ್ರಾಮದ ಬಳಿ ಡ್ರೋನ್ ಭಾರತದ ಭೂಪ್ರದೇಶ ಪ್ರವೇಶಿಸಿರುವುದನ್ನು ಗಮನಿಸಿದ ಸೈನಿಕರು ಅದರ ಮೇಲೆ ಗುಂಡು ಹಾರಿಸಿದರು.
ಒಂದು ಹೆಕ್ಸಾಕಾಪ್ಟರ್, ಭಾಗಶಃ ಹಾನಿಗೊಳಗಾದ ಸ್ಥಿತಿಯಲ್ಲಿರುವ ಮಾನವರಹಿತ ವೈಮಾನಿಕ ವಾಹನ ಮತ್ತು ಅದರೊಂದಿಗೆ ಟ್ಯಾಗ್ ಮಾಡಿದ ಬಿಳಿ-ಬಣ್ಣದ ಪಾಲಿಥಿನ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್‌ಎಫ್ ಪಂಜಾಬ್‌ನಲ್ಲಿ ಈವರೆಗೆ 200 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಪತ್ತೆ ಮಾಡಿದೆ. 2020 ಮತ್ತು 2021 ರಲ್ಲಿ ಕ್ರಮವಾಗಿ 45 ಮತ್ತು 65 ಡ್ರೋನ್ಗಳು ಪತ್ತೆಯಾಗಿದ್ದವು. ಬಿಎಸ್‌ಎಫ್ ಈ ವರ್ಷ ಕನಿಷ್ಠ 13 ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಇದನ್ನೂ ಓದಿ: ಮುಂಬೈನಲ್ಲಿ ಇನ್ನು ಡ್ರೋನ್ ಹಾರಿಸುವಂತಿಲ್ಲ: ಪೊಲೀಸರ ಆದೇಶ