ಅದಿಲಾಬಾದ್(ತೆಲಂಗಾಣ): ಇತ್ತೀಚೆಗೆ ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ ರಾಷ್ಟ್ರ ಸಮಿತಿಯಾಗಿ ಬದಲಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿರುವ ಕೆಸಿಆರ್ ಮೊದಲ ಬಾರಿಗೆ ಬೇರೆ ರಾಜ್ಯದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಆರ್‌ಎಸ್ ಮುಂದಾಗಿದೆ ಎಂದು ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಬಿಆರ್‌ಎಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಆದಿಲಾಬಾದ್ ಜಿಲ್ಲಾ ಸರ್ಕಾರಿ ಸಚೇತಕ ಬಾಲ್ಕ ಸುಮನ್, ಶಾಸಕ ಜೋಗು ರಾಮಣ್ಣ, ಮಾಜಿ ಸಂಸದ ಗೋಡೆಂ ನಾಗೇಶ್ ಹಾಗೂ ಇತರ ರಾಜ್ಯಗಳ ಮುಖಂಡರೊಂದಿಗೆ ಭಾನುವಾರ ಮತ್ತು ಸೋಮವಾರ ಪ್ರಗತಿ ಭವನದಲ್ಲಿ ಸಭೆ ನಡೆಸಿದ್ದು, ಈ ಬಗ್ಗೆ ಮಂಗಳವಾರ ರಾತ್ರಿ ಮತ್ತೊಮ್ಮೆ ಮುಖಂಡರ ಜೊತೆ ಅವರು ಚರ್ಚೆಸಿದ್ದಾರೆ.
ಉಸ್ತುವಾರಿಗಳನ್ನಾಗಿ ಬಿಆರ್‌ಎಸ್ ನಾಯಕರ ನೇಮಕ: ಈ ಸುದೀರ್ಘ ಚರ್ಚೆಯಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿ (ಜೆಡಿಪಿಟಿಸಿ) ಹಾಗೂ ಪಂಚಾಯಿತಿ ಸಮಿತಿ (ಎಂಪಿಟಿಸಿ)ಯ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದೆ. ಮೂರು ಜೆಡಿಪಿಟಿಸಿ, ಆರು ಎಂಪಿಟಿಸಿಗಳಲ್ಲಿ ಸ್ಪರ್ಧಿಸಲು ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ತೆಲಂಗಾಣದ ಬಿಆರ್‌ಎಸ್ ನಾಯಕರನ್ನು ಮಹಾರಾಷ್ಟ್ರದ ಜಿಲ್ಲೆಗಳ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಅದಿಲಾಬಾದ್‌ಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಯವತ್ಮಾಲ್, ವಾರ್ದಾ ಮತ್ತು ವಾಸಿಂ ಜಿಲ್ಲೆಗಳಿಗೆ ಅದಿಲಾಬಾದ್ ಶಾಸಕ ಜೋಗು ರಾಮಣ್ಣ ಮತ್ತು ಮಾಜಿ ಸಂಸದ ಗೊಡೊಂ ನಾಗೇಶ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದ್ದು, ಈ ಇಬ್ಬರೂ ನಾಯಕರು ಮೂರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ.
ಹೋಳಿ ಹಬ್ಬದ ನಂತರ ಬಿಆರ್‌ಎಸ್ ನಾಯಕರ ಮಹಾರಾಷ್ಟ್ರ ಪ್ರವಾಸ: ಸರ್ಕಾರಿ ಸಚೇತಕ ಬಾಲ್ಕ ಸುಮನ್ ಅವರಿಗೆ ಚಂದ್ರಾಪುರ ಮತ್ತು ಗಡ್ಚಿರೋಲಿ ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ. ಈ ಹಿಂದೆ ಒಬ್ಬೊಬ್ಬರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಬೇಕು ಎಂದು ಭಾವಿಸಲಾಗಿತ್ತು, ಆದರೆ, ಅಂತಿಮವಾಗಿ ಎರಡ್ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಹಲವು ನಾಯಕರಿಗೆ ನೀಡಲಾಗಿದೆ. ಡಿಸಿಸಿಬಿ ಅಧ್ಯಕ್ಷ ಅಡ್ಡಿ ಭೋಜಾರೆಡ್ಡಿ, ಪಕ್ಷದ ಹಿರಿಯ ಮುಖಂಡರಾದ ಅರಿಗೆಲ ನಾಗೇಶ್ವರ ರಾವ್, ಪುರಂ ಸತೀಶ್ ಅವರು ಈ ಚುನಾವಣೆಗಾಗಿ ಕಸರತ್ತು ನಡೆಸಲಿದ್ದಾರೆ. ಹೋಳಿ ಹಬ್ಬದ ನಂತರ ಬಿಆರ್‌ಎಸ್ ನಾಯಕರು ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಗ್ರಾಮ ಮಟ್ಟದ ಮುಖಂಡರನ್ನು ಪಕ್ಷಕ್ಕೆ ಕರೆತರಲು ಮತ್ತು ತೆಲಂಗಾಣದಲ್ಲಿ ಜಾರಿಯಾಗುತ್ತಿರುವ ಕಲ್ಯಾಣ ಯೋಜನೆಗಳನ್ನು ಅಲ್ಲಿನ ಜನರಿಗೆ ಮುಟ್ಟಿಸುವ ಕೆಲಸವನ್ನು ಅವರು ಮಾಡಲಿದ್ದಾರೆ.
ಇದನ್ನೂ ಓದಿ:ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮನೀಶ್ ಸಿಸೋಡಿಯಾ ಭಾವನಾತ್ಮಕ ಪತ್ರ
ಅಬ್ ಕಿ ಬಾರ್ ಕಿಸಾನ್ ಸರ್ಕಾರ್ - ಕೆಸಿಆರ್: ಇತ್ತೀಚೆಗೆ ಮಹಾರಾಷ್ಟ್ರದ ನಾಂದೇಡ್ಗೆ ಭೇಟಿ ನೀಡಿದ್ದ ಕೆಸಿಆರ್ "ದೇಶದ ಸದ್ಯ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ನೋಡಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾಯಿಸಲಾಗಿದೆ. ದೇಶದಲ್ಲಿ ಬದಲಾವಣೆ ತರಲೆಂದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು ಹೋಗಿದೆ. ಈ ಅವಧಿಯಲ್ಲಿ ಅನೇಕ ಸರ್ಕಾರಗಳು ಬದಲಾಗಿವೆ. ಹಲವು ನಾಯಕರು ಹಲವು ಮಾತುಗಳನ್ನು ಹೇಳಿದ್ದಾರೆ. ಆದರೆ, ಆ ಮಟ್ಟಿಗೆ ಯಾವುದೇ ಬದಲಾವಣೆ ಆಗಿಲ್ಲ. 75 ವರ್ಷ ಕಳೆದರೂ ಕೂಡ ಜನರಿಗೆ ಕನಿಷ್ಠ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗದ ಪರಿಸ್ಥಿತಿ ಇದೆ. ಇದೇ ಮಹಾರಾಷ್ಟ್ರದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಕಷ್ಟಪಟ್ಟು ಬೆಳೆದರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ. ಆದ್ದರಿಂದಲೇ ನಮ್ಮ ಬಿಆರ್‌ಎಸ್ ಪಕ್ಷವು 'ಅಬ್ ಕಿ ಬಾರ್ ಕಿಸಾನ್ ಸರ್ಕಾರ್' ಎಂಬ ಘೋಷಣೆಯನ್ನು ಮುಂದಿಟ್ಟಿದೆ ಎಂದಿದ್ದರು.