ಹೈದರಾಬಾದ್ (ತೆಲಂಗಾಣ): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷಕ್ಕೆ ಭರ್ಜರಿ ದೇಣಿಗೆ ಬಂದಿದೆ. 2022-23ನೇ ಸಾಲಿನಲ್ಲಿ ಬಿಆರ್ಎಸ್ಗೆ ಹಲವಾರು ಮೂಲಗಳಿಂದ ವಿವಿಧ ರೂಪಗಳಲ್ಲಿ 683 ಕೋಟಿ (683,06,70,500 ರೂ.) ರೂಪಾಯಿಗೂ ಅಧಿಕ ದೇಣಿಗೆ ಸಂದಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಮೂಲಕ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ದೇಶದ ಪ್ರಾದೇಶಿಕ ಪಕ್ಷಗಳ ಪೈಕಿ ಅತ್ಯಧಿಕ ದೇಣಿಗೆ ಸ್ವೀಕರಿಸಿದ ಪಕ್ಷವಾಗಿದೆ.
ಬಿಆರ್‌ಎಸ್ ಪಕ್ಷವು ಚುನಾವಣಾ ಬಾಂಡ್‌ಗಳ ಮೂಲಕ 529 ಕೋಟಿ ರೂ. (529,03,70,000), ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ಗಳಿಂದ 90 ಕೋಟಿ ಮತ್ತು ಇತರ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ 64 ಕೋಟಿ (64,03,00,500) ರೂ.ಗಳ ದೇಣಿಗೆ ಸ್ವೀಕರಿಸಿದೆ. ಈ ಪಕ್ಷಕ್ಕೆ ಬಂದಿರುವ 64.03 ಕೋಟಿ ರೂ. ದೇಣಿಗೆಯಲ್ಲಿ ಹೆಚ್ಚಿನ ಹಣವನ್ನು ಪಕ್ಷದ ಸಚಿವರು, ಜನಪ್ರತಿನಿಧಿಗಳು, ಮುಖಂಡರು ಮತ್ತು ಅವರ ಕುಟುಂಬಗಳಿಗೆ ಸೇರಿದ ಸಂಸ್ಥೆಗಳು ಒದಗಿಸಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ಹೇಳಿದೆ.
ಬಿಆರ್‌ಎಸ್ ದೇಣಿಗೆ ವಿವರ: ವರದಿಗಳ ಪ್ರಕಾರ, ರಾಜ್ಯ ನಾಗರಿಕ ಸರಬರಾಜು ಸಚಿವ ಗಂಗೂಲ ಕಮಲಾಕರ್ 10 ಕೋಟಿ ರೂ., ಹಂಶಾ ಪವರ್ ಮತ್ತು ಇನ್ಫ್ರಾ ಕಂಪನಿಯ ನಿರ್ದೇಶಕರಾದ ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್ ಅವರ ಪತ್ನಿ ಜಯಶ್ರೀ, ಉದಯ್ ಕುಮಾರ್ ಅವರ ಪತ್ನಿ ಮತ್ತು ಪುತ್ರ ನರೇನ್ 10 ಕೋಟಿ ರೂ., ರಾಜ್ಯಸಭಾ ಸದಸ್ಯ ವಡ್ಡಿರಾಜು ರವಿಚಂದ್ರ ಅವರ ಗಾಯತ್ರಿ ಗ್ರಾನೈಟ್ ಕಂಪನಿಯು 10 ಕೋಟಿ ರೂ., ಕಾರ್ಮಿಕ ಸಚಿವ ಚಾಮಕೂರ ಮಲ್ಲಾರೆಡ್ಡಿ 2.75 ಕೋಟಿ ರೂ., ಪತ್ನಿ ಕಲ್ಪನಾ ಅವರು 2.25 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಅಲ್ಲದೇ, ವಿಧಾನ ಪರಿಷತ್ ಸದಸ್ಯ ಪಿ.ವೆಂಕಟರಾಮರೆಡ್ಡಿ ಸಂಬಂಧಿಕರಿಗೆ ಸೇರಿದ ರಾಜಪುಷ್ಪ ಪ್ರಾಪರ್ಟಿಸ್ 10 ಕೋಟಿ ರೂ., ವೇಮುಲವಾಡ ಕ್ಷೇತ್ರದ ಬಿಆರ್‌ಎಸ್ ಅಭ್ಯರ್ಥಿ ಚಲ್ಮೇಡ ನರಸಿಂಹರಾವ್ ಕುಟುಂಬಕ್ಕೆ ಸೇರಿದ ಚಲ್ಮೇಡ ಫೀಡ್ಸ್ ಮತ್ತು ವಿಮಲಾ ಫೀಡ್ಸ್ ತಲಾ ಎರಡು ಕೋಟಿ 4 ಕೋಟಿ ರೂ. ಹಾಗೂ ಕೋಲ್ಕತ್ತಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಕೆಜೆ ಎಂಟರ್‌ಪ್ರೈಸಸ್ ಸಹ ದೇಣಿಗೆಯಾಗಿ ಬಿಆರ್ಎಸ್ಗೆ 5 ಕೋಟಿ ರೂ. ದೇಣಿಗೆ ನೀಡಿದೆ.
ಬಿಆರ್‌ಎಸ್ ಬಳಿಕ ನಂತರ ಪ್ರಾದೇಶಿಕ ಪಕ್ಷಗಳ ಪೈಕಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು 192.22 ಕೋಟಿ ರೂ.ಗಳ ದೇಣಿಗೆ ಸ್ವೀಕರಿಸಿದೆ. ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್ಆರ್ ಕಾಂಗ್ರೆಸ್ 68 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಇದರಲ್ಲಿ 52 ಕೋಟಿ ರೂ. ಚುನಾವಣಾ ಬಾಂಡ್‌ಗಳ ಮೂಲಕ ಹಾಗೂ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ಗಳಿಂದ 16 ಕೋಟಿ ರೂ.ಗಳ ದೇಣಿಗೆಯನ್ನು ವೈಎಸ್ಆರ್ ಕಾಂಗ್ರೆಸ್ ಪಡೆದಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ)ಕ್ಕೆ 11 ಕೋಟಿ ರೂ., ಎಐಎಂಐಎಂ ಪಕ್ಷಕ್ಕೆ 24 ಲಕ್ಷ ರೂ. ದೇಣಿಗೆ ಸಂದಾಯವಾಗಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹರಿದು ಬಂತು 1033 ಕೋಟಿ ರೂ.