ಜೈಪುರ(ರಾಜಸ್ಥಾನ್): ಹಣ್ಣು ಕೃಷಿ ಮಾಡುವ ರೈತರು ಮಳೆಗಾಗಿ ಎದುರು ನೋಡುತ್ತಾರೆ. ಅಂದರೆ ಮಳೆ ಅಥವಾ ನೀರು ಇಲ್ಲದಿದ್ದರೆ ಅದೆಷ್ಟೋ ಹಣ್ಣಿನ ಫಸಲು ತೆಗೆಯಲು ಸಾಧ್ಯವೇ ಇಲ್ಲ. ಹೀಗೆ ದಾಳಿಂಬೆ ಬೆಳೆ ಸಹ ನೀರನ್ನೇ ನಂಬಿಕೊಂಡಿರುವ ಬೆಳೆ. ಆದ್ರೆ ಇಲ್ಲಿಬ್ಬರು ಸಹೋದರರು ಮಾತ್ರ ಬೇಸಿಗೆಯಲ್ಲಿ ದಾಳಿಂಬೆ ಬೆಳೆದು ಯಶಸ್ವಿಯಾಗಿರುವುದಲ್ಲದೆ, ಲಕ್ಷ ಲಕ್ಷ ರೂ ಆದಾಯ ಗಳಿಸಿದ್ದಾರೆ.
ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇವರಿಬ್ಬರೇ ಸಾಕ್ಷಿ. ಒಂದು ಎಕರೆ ಜಾಗದಲ್ಲಿ ದಾಳಿಂಬೆ ಬೆಳೆದಿರುವ ಇವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಈ ಮೊದಲು ರೈತನ ಅಣ್ಣ ಮಹಾರಾಷ್ಟ್ರದಲ್ಲಿ ಟ್ರಾಕ್ಟರ್ ಕಂಪ್ರೆಸರ್ ವ್ಯವಹಾರ ಮಾಡುತ್ತಿದ್ದರು. ಅಲ್ಲಿ ದಾಳಿಂಬೆ ಉತ್ತಮ ಇಳುವರಿ ನೋಡಿ, ಇಲ್ಲಿಯೂ ಕೃಷಿ ಮಾಡಬೇಕು ಎಂದುಕೊಂಡರಂತೆ. ಹೀಗಾಗಿ ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ದಾಳಿಂಬೆ ನಾಟಿ ಮಾಡಿದರು.
ಇದರಲ್ಲಿ ಕಂಧಾರಿ ಎಂಬ ಜಾತಿಯ ದಾಳಿಂಬೆ ಮಹಾರಾಷ್ಟ್ರದಲ್ಲಿ ಮಾತ್ರ ಕಂಡುಬರುತ್ತದೆ. ಆದರೆ ಇವರು ರಾಜಸ್ಥಾನದಲ್ಲಿಯೂ ಕೃಷಿ ಮಾಡಿದ್ದಾರೆ. ಇಲ್ಲಿ ಒಟ್ಟು 4 ಸಾವಿರ ದಾಳಿಂಬೆ ಗಿಡಗಳನ್ನು ಬೆಳೆದಿದ್ದಾರೆ. ಸದ್ಯ ಮಾರ್ಕೆಟ್ನಲ್ಲಿ ಪ್ರತಿ ಕೆ.ಜಿ ದಾಳಿಂಬೆಗೆ 100ರಿಂದ 120ರೂ ದರವಿದೆ.
ಈ ಮಾದರಿ ರೈತರಿಬ್ಬರೂ ಪುನರಾವರ್ತನಾ ಕೃಷಿ ಮಾಡುತ್ತಿದ್ದು, ಮಳೆಗಾಲ ಮುಗಿದ ಬಳಿಕ ಬೇಸಿಗೆಯಲ್ಲೂ ದಾಳಿಂಬೆ ಬೆಳೆ ತೆಗೆಯುತ್ತಾರೆ. ಚಳಿಗಾಲದಲ್ಲಿ ದಾಳಿಂಬೆ ಗಿಡದಲ್ಲಿ ಹೂಬಿಡುತ್ತವೆ. ಆದರೆ ಆ ಹೂವುಗಳು ಹಣ್ಣಾಗುವ ಮೊದಲೇ ಮುರಿದು ಬೀಳುತ್ತವೆ. ಹೀಗಾಗಿ ಬೇಸಿಗೆಯಲ್ಲಿ ಉತ್ತಮ ಇಳುವರಿ ಸಾಧ್ಯವಾಗಿದ್ದು, ಅವರೀಗ ಒಂದು ಖುತುವಿನಲ್ಲಿ 50ರಿಂದ 60 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಶಿಕ್ಷಣ ಪಡೆದು ಕೃಷಿ ಮಾಡಲು ಹಿಂದೇಟು ಹಾಕುವವರ ನಡುವೆ ಸಹೋದರರಿಬ್ಬರ ಕೃಷಿ ಪ್ರೀತಿ ಅವರ ಬದುಕನ್ನೇ ಬದಲಿಸಿದೆ. ಕೃಷಿ ಭೂಮಿಗಿಂತಲೂ ಉತ್ತಮ ಆಯ್ಕೆ ಇನ್ನೊಂದಿಲ್ಲ ಎಂಬುದನ್ನು ಇಬ್ಬರು ನಿರೂಪಿಸಿದ್ದಾರೆ. ರೈತರು ಸಾಂಪ್ರದಾಯಿಕ ಕೃಷಿಯ ಜೊತೆ ಯುವಕರು ಹೆಚ್ಚಾಗಿ ತೋಟಗಾರಿಕೆ ಕೃಷಿಯನ್ನೂ ಉದ್ಯೋಗವನ್ನಾಗಿ ಮಾಡಬಹುದು ಎಂಬುದು ಇಬ್ಬರ ಮಾತು.
ಇಷ್ಟಾದರೂ ದಾಳಿಂಬೆ ಕೃಷಿಗೆ ಪಕ್ಷಗಳೆ ಮೊದಲ ಪೀಡಕಗಳಂತೆ. ಹೀಗಾಗಿ ತೋಟದಲ್ಲಿ ಬಲೆ ಅಳವಡಿಸಿದ್ದಾರೆ. ಅಲ್ಲದೆ ಹನಿ ನೀರಾವರಿಯ ಮೂಲಕ ಪ್ರತಿ ಗಿಡಗಳಿಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕಾರ್ಪೋರೇಟ್ ಜಗತ್ತಿನಲ್ಲಿ ಯಂತ್ರಗಳ ಹಿಂದೆ ಬೀಳದೆ, ಭೂಮಿಯ ನಂಬಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಕೃಷಿ ಲಾಭದಾಯಕ ಕ್ಷೇತ್ರ ಅಲ್ಲ ಎನ್ನುವ ಮಂದಿಗೆ ರೈತ ಸಹೋದರರು ಮಾದರಿಯಾಗಿದ್ದಾರೆ.