ಯೆಲ್ಲಾಂಡು ಕೊತಗುಡೆಂ( ಹೈದರಾಬಾದ್): ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದಕ್ಕೆ ಸಹೋದರನೊಬ್ಬ ತನ್ನ ಸಹೋದರಿಯನ್ನು ಕೊಂದು ಹಾಕಿರುವ ಘಟನೆ ತೆಲಂಗಾಣದ ಕೋತಗುಡೆಂ ಜಿಲ್ಲೆಯ ಯೆಲ್ಲಾಂಡು ಮಂಡಲದ ರಾಜೀವ್ ನಗರದಲ್ಲಿ ನಡೆದಿದೆ. ರಾಜೀನ್ ನಗರದ ನಿವಾಸಿ ಸಿಂಧು ಸಂಘವಿ(21) ಮೃತ ದುರ್ದೈವಿ.
ಮೃತ ಸಿಂಧು ಅವರು ಮಹಬೂಬಾಬಾದ್ನ ತೆಲಂಗಾಣ ಆರೋಗ್ಯ ಇಲಾಖೆಯಲ್ಲಿ ಸಹಾಯಕ ನರ್ಸ್ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದರು. ಸಹೋದರಿ ಸಿಂಧು ಮೊಬೈಲ್ ಬಳಸುತ್ತಿದ್ದ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಇರುತ್ತಿದ್ದಳು. ಆಗಾಗ್ಗೆ ಯುಟ್ಯೂಬ್ದಲ್ಲಿ ರೀಲ್ ಪೋಸ್ಟ್ ಮಾಡುತ್ತಿದ್ದಳು. ಅದು ಅವಳ ಸಹೋದರ ಹರಿಲಾಲ್ಗೆ ಇಷ್ಟವಿರಲಿಲ್ಲ. ಈ ವಿಷಯದ ಬಗ್ಗೆ ಆಗಾಗ್ಗೆ ಅವಳೊಂದಿಗೆ ಜಗಳ ಆಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಕರುಣಾಕರ್ ತಿಳಿಸಿದ್ದಾರೆ.
ಸೋಮವಾರ ರಾತ್ರಿಯೂ ಸಿಂಧು ಹಾಗೂ ಸಹೋದರ ಹರಿಲಾಲ್ ನಡುವೆ ಆಕೆಯು ಸೋಷಿಯಲ್ ಮೀಡಿಯಾಗೆ ಪೊಸ್ಟ್ ಮಾಡುವ ಕುರಿತಾಗಿ ಜಗಳ ನಡೆದಿತ್ತು. ಸಹೋದರ ಹಾಗೂ ಸಹೋದರಿ ಸಿಂಧು ನಡುವೆ ವಾದ -ವಿವಾದ ನಡೆದು ಅದು ವಿಕೋಪಕ್ಕೆ ತಿರುಗಿತು. ಆ ಸಿಟ್ಟಿನಲ್ಲಿ ಸೋದರ ಹರಿಲಾಲ್ ಸಹೋದರಿ ಸಿಂಧು ತಲೆಗೆ ಗಾರೆ ಕಲ್ಲಿನಿಂದ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದಳು ಎಂದು ತಿಳಿದು ಬಂದಿದೆ.
ತೀವ್ರ ಗಾಯಗೊಂಡಿದ್ದ ಸಿಂಧು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಂಗಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ತೀವ್ರ ಗಾಯಗೊಂಡಿದ್ದ ಸಿಂಧು ಸಾವಿಗೀಡಾಗಿದ್ದಾಳೆ.
ಮಂಗಳವಾರ ಬೆಳಗ್ಗೆ ಕುಟುಂಬಸ್ಥರು ಸಿಂಧು ಅವರದ್ದು ಸಾಮಾನ್ಯ ಸಾವು ಎಂದು ಬಿಂಬಿಸಿ ಅಂತ್ಯ ಸಂಸ್ಕಾರಕ್ಕೆ ತರಾತುರಿ ವ್ಯವಸ್ಥೆ ಮಾಡುತ್ತಿದ್ದರು. ಈ ವೇಳೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಎಚ್ಚೆತ್ತು ಅಂತ್ಯ ಸಂಸ್ಕಾರ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಕೊಲೆಯ ನಂತರ ಆರೋಪಿ ಹರಿಲಾಲ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಪ್ರಕರಣದ ಕುರಿತಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಕರುಣಾಕರ್ ತಿಳಿಸಿದ್ದಾರೆ.
ಮಕ್ಕಳ ಅಶ್ಲೀಲ ವಿಡಿಯೋ ಶೇರ್ ಮಾಡುತ್ತಿದ್ದ ಯುವಕನ ಬಂಧನ: ಅಮೆರಿಕದ ತನಿಖಾ ಸಂಸ್ಥೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ (ಎಚ್‌ಎಸ್‌ಐ) ನೀಡಿದ ಮಾಹಿತಿಯ ಮೇರೆಗೆ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಯುವಕನನ್ನು ತೆಲಂಗಾಣದ ರಾಚಕೊಂಡ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈತ ಹಲವು ವರ್ಷಗಳಿಂದ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಮತ್ತು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂಓದಿ:ಡೀಸೆಲ್ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳ.. ಚಾಲಕರಿಂದ ಹಲ್ಲೆಗೊಳಗಾಗಿ ಸಾವು