ಸಿಲಿಗುರಿ(ಪಶ್ಚಿಮ ಬಂಗಾಳ): ಕಾಡಿನ ಚಿಲುಮೆಯ ನೀರು ಸ್ವಚ್ಛವಾಗಿರುತ್ತಿದೆ. ಹಾಗಂತ ಪಶ್ಚಿಮ ಬಂಗಾಳದ ಸಿಲಿಗುರಿಯ ಒಬ್ಬ ವ್ಯಕ್ತಿ ಒಸರು ನೀರನ್ನು ಕುಡಿದು ಸಂಕಷ್ಟಕ್ಕೆ ಒಳಗಾಗಿದ್ದಾನೆ. ನೀರಿನ ಜೊತೆ ಜಿಗಣೆ(Leech)ಯನ್ನೂ ನುಂಗಿದ್ದು ಅದು ಶ್ವಾಸನಾಳದಲ್ಲಿ ಸಿಲುಕಿಕೊಂಡು ಸಮಸ್ಯೆಗೆ ಒಳಗಾಗಿದ್ದ. ಈಗ ವೈದ್ಯರು ಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಆದರೆ ಜಿಗಣೆ ನುಂಗಿ 15 ದಿನ ಆದರೂ ಜೀವಂತ ಆಗಿದ್ದದ್ದು ವೈದ್ಯರಲ್ಲಿ ಅಚ್ಚರಿ ಮೂಡಿಸಿದೆ.
ಹದಿನೈದು ದಿನಗಳ ನಂತರ ವೈದ್ಯರು ಅಪರೂಪದ ಶಸ್ತ್ರಕ್ರಿಯೆ ನಡೆಸಿ ಜೀವಂತವಾಗಿದ್ದ ಜಿಗಣೆಯನ್ನು ಶ್ವಾಸನಾಳದಿಂದ ಹೊರತೆಗೆದಿದ್ದಾರೆ. ರೋಗಿಯನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಕ್ಕಾಗಿ ರೋಗಿಯ ಕುಟುಂಬವು ಆಸ್ಪತ್ರೆಯ ವೈದ್ಯರಿಗೆ ಸಾಕಷ್ಟು ಧನ್ಯವಾದ ಹೇಳಿದ್ದಾರೆ.
ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಮಿರಿಕ್ನ ಸಜಿನ್ ರೈ (49) 15 ದಿನಗಳ ಹಿಂದೆ ಸ್ಥಳೀಯ ಚಿಲುಮೆಯಿಂದ ನೀರು ಕುಡಿಯಲು ಯತ್ನಿಸಿದಾಗ ಜಿಗಣೆ ಗಂಟಲಲ್ಲಿ ಸಿಲುಕಿಕೊಂಡಿತ್ತು. ನಂತರ ಅದು ಕ್ರಮೇಣ ಶ್ವಾಸನಾಳಕ್ಕೆ ಚಲಿಸಿತು. ಅಂದಿನಿಂದ, ಅವರು ಅಸ್ವಸ್ಥರಾಗಿದ್ದರು. ಸ್ಥಳೀಯ ಆಸ್ಪತ್ರೆಯವರ ಸಲಹೆಯ ಮೆರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋಗಲು ಸಲಹೆ ನೀಡಲಾಗಿತ್ತು.
ರೈ ಅವರ ಆರೋಗ್ಯ ಸ್ಥಿತಿ ಗಂಭೀರತೆ ಕಂಡು ಆಸ್ಪತ್ರೆ ವೈದ್ಯರ ತಂಡ ರಚಿಸಿ ತುರ್ತಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾರೆ. ಬುಧವಾರ ಒಂದೂವರೆ ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಜಿಗಣೆಯನ್ನು ಹೊರತರಲಾಯಿತು. ಜಿಗಣೆಯೂ ಜೀವಂತವಾಗಿತ್ತು. ರೈ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇಎನ್‌ಟಿ ವಿಭಾಗದ ಮುಖ್ಯಸ್ಥ ರಾಧೇಶ್ಯಾಮ್ ಮಹತೋ, ನನ್ನ ಸುಮಾರು 40 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಶ್ವಾಸನಾಳದಲ್ಲಿ 15 ದಿನಗಳ ಕಾಲ ಜಿಗಣೆ ಜೀವಂತವಾಗಿರುವುದನ್ನು ನಾನು ನೋಡಿಲ್ಲ. ಆತಂಕಕಾರಿಯಾಗಿ, ರೋಗನಿರ್ಣಯ ಮಾಡುವಾಗ ಅದು ಉಸಿರಾಟದ ಪ್ರದೇಶಕ್ಕೆ ಚಲಿಸುತ್ತಿತ್ತು. ಅದಕ್ಕೇ ಬಹಳ ಜಾಗರೂಕರಾಗಿರಬೇಕಿತ್ತು. ಇದೊಂದು ಅಪರೂಪದ ಘಟನೆ. ಸದ್ಯ ರೋಗಿ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್ ಭೀತಿ: ರಾಜ್ಯಗಳಲ್ಲಿ ಕೊರೊನಾ ತುರ್ತು ಸಭೆ