ಹೈದರಾಬಾದ್(ತೆಲಂಗಾಣ): ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಅವಘಡದಲ್ಲಿ ಆಕೆಯ ತಂದೆ ಸಹ ಪ್ರಾಣ ಕಳೆದುಕೊಂಡಿದ್ದಾರೆ. ನಿರ್ಮಲ ಜಿಲ್ಲೆಯ ಮಾದಿಪದಗದಲ್ಲಿ ಈ ಘಟನೆ ನಡೆದಿದೆ.
ಮೌನಿಕಾ (25), ತಂದೆ ರಾಜಯ್ಯ (50) ಮೃತದುರ್ದೈವಿಗಳು. ನಿರ್ಮಲ ಜಿಲ್ಲೆಯ ಕೊಡೆಮ್ ವಲಯದ ಪಾಂಡವಪುರ್ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿ ಬಿದ್ದು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ಆರತಕ್ಷತೆ ಮುಗಿಸಿಕೊಂಡು ಹಿಂದಿರುಗುವಾಗ ಅವಘಡ ಸಂಭವಿಸಿದೆ.
ಆಗಸ್ಟ್ 25ರಂದು ಮಹಾರಾಷ್ಟ್ರದ ಬಲಹರ್ಷಾ ಮೂಲದ ವರ ಜನಾರ್ದನ್ ಜತೆ ಮೌನಿಕಾ ಮದುವೆ ನಡೆದಿತ್ತು. ಸಾವಿನಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವರ ಜನಾರ್ದನ್ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೌನಿಕಾ ಹಾಗೂ ರಾಜಯ್ಯ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.