ಶಿಮ್ಲಾ/ಚಂಡೀಗಢ: ಮೊಹಾಲಿಯ ಚಂಡೀಗಢ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಸೋರಿಕೆಯಾಗಿವೆ ಎಂಬ ವದಂತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿದ್ಯಾರ್ಥಿನಿಯ ಆಪಾದಿತ ಗೆಳೆಯನನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬಂಧಿಸಲಾಗಿದೆ. ಪೊಲೀಸರು ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಯುವಕ ವಿಡಿಯೋವನ್ನು ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿತ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಸೇರಿ ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಯುವಕ ಶಿಮ್ಲಾದ ಧಾಲಿ ಪ್ರದೇಶದವನು ಎಂದು ಗುರುತಿಸಲಾಗಿದೆ.
ವಿಡಿಯೋ ಬಹಿರಂಗವಾದ ನಂತರ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ವಿವಿ ಆಡಳಿತ ಮಂಡಳಿ ಈ ವಿಚಾರವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಪ್ರತಿಭಟನೆ ಹೆಚ್ಚಾಗುತ್ತಿರುವ ಕಾರಣ ಆಡಳಿತ ಮಂಡಳಿ ವಿವಿಗೆ ಸಪ್ಟೆಂಬರ್ 19 ಮತ್ತು 20ರಂದು ರಜೆ ಘೋಷಿಸಿದೆ.
ಪಂಜಾಬ್ ಪೊಲೀಸರಿಗೆ ಸಹಕಾರ: ಇದು ಅತ್ಯಂತ ದುರದೃಷ್ಟಕರ ಘಟನೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ. ಪಂಜಾಬ್ ಪೊಲೀಸರು ಮತ್ತು ಹಿಮಾಚಲ ಪೊಲೀಸರು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊಹಾಲಿ ಪೊಲೀಸರೊಂದಿಗೆ ಮತ್ತು ಡಿಜಿಪಿ ಸಂಜಯ್ ಕುಂದು ಸಹಕರಿಸುವಂತೆ ಕೋರಲಾಗಿದೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಪಂಜಾಬ್ ಪೊಲೀಸರಿಂದ ಸ್ಪಷ್ಟನೆ.. ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಯಾವುದೇ ಖಾಸಗಿ ವಿಡಿಯೋ ಅಥವಾ ಫೋಟೋಗಳು ಸೋರಿಕೆಯಾಗಿಲ್ಲ. ಪ್ರಕರಣದ ಆರೋಪಿಯಾಗಿರುವ ಯುವತಿಯು ತನ್ನದೇ ಖಾಸಗಿ ವಿಡಿಯೋವನ್ನು ತನ್ನ ಗೆಳೆಯನಿಗೆ ರವಾನಿಸಿದ್ದಾಳೆ. ಮತ್ತು ವಿವಿ ಹಾಸ್ಟೆಲ್ನ ಯಾವೊಬ್ಬ ವಿದ್ಯಾರ್ಥಿನಿಯರು ಈ ಘಟನೆಯಿಂದ ಆತ್ಮಹತ್ಯೆಗೆ ಯತ್ನಿಸಿಲ್ಲವೆಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ವಿರುದ್ಧ ಬೃಹತ್ ಪ್ರತಿಭಟನೆ