ಸೂರತ್ :ಸಾಮಾನ್ಯವಾಗಿ ಸಮಾಜಮುಖಿ ಕೆಲಸ ಮಾಡಿದವರಿಗೆ ಜನರು ಅದ್ಧೂರಿ ಸ್ವಾಗತ ಕೋರುವುದನ್ನು ನೋಡಿರುತ್ತೇವೆ. ಆದರೆ ಗುಜರಾತ್ನ ಸೂರತ್ನಲ್ಲಿ ಕೊಲೆ ಅಪರಾಧಿ ಹಾಗೂ ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದ ಅಪರಾಧಿಗಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಐಶಾರಾಮಿ ಕಾರುಗಳಲ್ಲಿ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಸ್ವಾಗತ ಕೋರಿದ ವಿಲಕ್ಷಣ ಘಟನೆಗೆ ಗುಜರಾತ್ ಸಾಕ್ಷಿಯಾಗಿದ್ದು, ಈ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ.
ಈಶ್ವರ್ ವಾಸ್ಫೋಡಿಯಾ ಎಂಬ ಕ್ರಿಮಿನಲ್, ಸೂರತ್‌ನ ಪಾಲ್ಸಾನಾ ತಾಲೂಕಿನ ಕಡೋದರ ಗ್ರಾಮದವನು. ಮದ್ಯ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನು ಪಡೆದು ಹೊರಬಂದಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ವಾಸ್ಫೋಡಿಯಾನ ಸ್ನೇಹಿತರು ಅವನ್ನು ಜಾಗ್ವಾರ್ ಸೇರಿದಂತೆ ಆರೇಳು ಐಶಾರಾಮಿ ಕಾರುಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದಾರೆ.
ವೈರಲ್ ಆದ ಮತ್ತೊಂದು ವಿಡಿಯೋದಲ್ಲಿ ಸೂರತ್ ನಗರದ ಲಿಂಬಾಯತ್ ಪ್ರದೇಶದ ಕೊಲೆ ಪ್ರಕರಣದ ಆರೋಪಿ ಕೈಲಾಶ್ ಪಾಟೀಲ್ ಕೂಡ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅದ್ದೂರಿ ಸ್ವಾಗತ ಪಡೆದು ಊರು ತಲುಪಿದ್ದಾನೆ. ಡಜನ್ ಗಟ್ಟಲೇ ಕಾರುಗಳ ಬೆಂಗಾವಲಿನಲ್ಲಿ, ಕಾರಿನಲ್ಲಿ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಅವನ ಸ್ನೇಹಿತರು ಮನೆಗೆ ಸ್ವಾಗತಿಸಿದ್ದಾರೆ.
ಇನ್ನು ಜಾಮೀನು ಆದೇಶದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾಟೀಲ್ ನನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪಿಗಳಿಗೆ ಅದ್ದೂರಿ ಸ್ವಾಗತ ಕೋರಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡು ಆತನನ್ನು ಬಂಧಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಸಮಾಜಘಾತುಕರಿಗೆ ಭರ್ಜರಿ ಸ್ವಾಗತ ನೀಡುತ್ತಿರುವುದು ಇದೇ ಮೊದಲಲ್ಲ. ಜಾರ್ಖಂಡ್‌ನ ರಾಮ್‌ಗಢದ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಜನರು ಗುಂಪು ಬಿಡುಗಡೆಯಾದಾಗ, ಆ ಜನರಿಗೆ ಕೇಂದ್ರ ಸಚಿವರೊಬ್ಬರು ಹೂಮಾಲೆ ಹಾಕಿ ಸ್ವಾಗತಿಸಿದ್ದರು.