ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಮುಂಬೈ ಎನ್ಡಿಪಿಎಸ್ ನ್ಯಾಯಾಲಯದಿಂದ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದರಿಂದ ಬಾಂಬೆ ಹೈಕೋರ್ಟ್ನಲ್ಲಿ ಅವರ ಪರ ವಕೀಲರು ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಅದರ ವಿಚಾರಣೆ ಇಂದು ನಡೆಯಲಿದೆ.
ಇದನ್ನೂ ಓದಿರಿ: ಆರ್ಯನ್ ಬಿಡುಗಡೆಗೆ 25 ಕೋಟಿ ಲಂಚ ಕೇಳಿದ ಆರೋಪ: ಎನ್ಸಿಬಿ ಸ್ಪಷ್ಟನೆ
ಹಡಗಿನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಡಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 11 ಮಂದಿಯನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಬಂಧಿಸಿದೆ. ಅಕ್ಟೋಬರ್ 7ರಂದು ಎನ್ಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್ಗೆ ಅಕ್ಟೋಬರ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈಗಾಗಲೇ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಆರ್ಯನ್ ಖಾನ್ ದಿನ ಕಳೆಯುತ್ತಿದ್ದಾರೆ.
ಆರ್ಯನ್ ಖಾನ್ ಬಂಧನವಾದಾಗಿನಿಂದಲೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಹೊಸ ಮಾಹಿತಿ ಬಹಿರಂಗೊಳ್ಳುತ್ತಿವೆ. ಆರ್ಯನ್ ಖಾನ್ ಜೊತೆ ಚಾಟ್ ಮಾಡಿರುವ ಅನನ್ಯಾ ಪಾಂಡೆಗೆ ಈಗಾಗಲೇ ವಿಚಾರಣೆ ನಡೆಸಿರುವ ಎನ್ಸಿಬಿ, ಮಹತ್ವದ ಮಾಹಿತಿ ಕಲೆ ಹಾಕಿಕೊಂಡಿದೆ. ಇದರ ಬೆನ್ನಲ್ಲೇ ಶಾರೂಖ್ ಖಾನ್ ಕಾರ್ ಡ್ರೈವರ್ಗೂ ವಿಚಾರಣೆಗೊಳಪಡಿಸಿದೆ.