ಹರಿದ್ವಾರ(ಉತ್ತರಾಖಂಡ) : ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಚಾರ್ಧಾಮ್ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಬಾಂಬ್ ಹಾಕುವುದಾಗಿ ರೈಲ್ವೆ ಪೊಲೀಸರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಪತ್ರದ ಮೂಲ ಹುಡುಕುವತ್ತ ತನಿಖೆ ಮುಂದುವರೆದಿದೆ.
ಅಕ್ಟೋಬರ್ 10ರಂದು ಪತ್ರ ಬಂದಿದ್ದು, ಅಕ್ಟೋಬರ್ 25 ಮತ್ತು 27ರಂದು ಚಾರ್ಧಾಮ್ ಪ್ರದೇಶದಲ್ಲಿ ಬಾಂಬ್ ಹಾಕುವುದಾಗಿ ಬರೆಯಲಾಗಿದೆ. ಇದು ಹುಸಿ ಬೆದರಿಕೆ ಪತ್ರವೇ ಅಥವಾ ನಿಜವೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಈ ರೀತಿ ಬೆದರಿಕೆ ಪತ್ರ ಬರುತ್ತಿದೆ. ಹಬ್ಬದ ವಿಶೇಷ ಸಂದರ್ಭದಲ್ಲಿ ಈ ರೀತಿಯ ಬೆದರಿಕೆ ಪತ್ರಗಳು ರೈಲ್ವೆ ಪೊಲೀಸರಿಗೆ ಬಂದಿದೆ. ಈ ಹಿಂದೆ ಹರಿದ್ವಾರದ ರೈಲ್ವೆ ನಿಲ್ದಾಣದಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯಿಂದ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಪತ್ರದ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಓರ್ವ ಕಾಶ್ಮೀರಿ ಪಂಡಿತಗೆ ಗುಂಡಿಕ್ಕಿ ಕೊಲೆ ಮಾಡಿದ ಉಗ್ರರು