ರಫಿಗಂಜ್ (ಔರಂಗಾಬಾದ್): ಬಾಲಿವುಡ್ ನಟ ಸೋನು ಸೂದ್ 'ಖುದ್ ಕಾಮಾವೋ ಘರ್ ಚಲಾವೋ ಅಭಿಯಾನ'ದಡಿಯಲ್ಲಿ ಔರಂಗಾಬಾದ್‌ನ ದಿವ್ಯಾಂಗ ಅವಧೇಶ್ ಅವರಿಗೆ ಇ-ರಿಕ್ಷಾ ಒದಗಿಸಿದ್ದಾರೆ.
ನಟನಿಂದ ಈ ಉಡುಗೊರೆಯನ್ನು ಪಡೆದ ಬಗ್ಗೆ ಅವಧೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ. ಸೋನು ಸೂದ್ ನಿಜವಾಗಿಯೂ ನಮಗೆ ದೇವರು ಎಂದು ಅವಧೇಶ್ ಹೇಳಿದ್ದಾರೆ.
![ಇ-ರಿಕ್ಷಾ](https://etvbharatimages.akamaized.net/etvbharat/prod-images/bh-au-02-real-hero-sonu-sood-vis-byte-pkg-bh10003_20032021223559_2003f_1616259959_290.jpg)
ಚರಕ್ವಾನ್ ಪಂಚಾಯತ್‌ನ ಬಡೋಪುರ ನಿವಾಸಿ ಚಂದ್ರದೀಪ್ ಪಾಸ್ವಾನ್ ಎಂಬುವರ ಪುತ್ರ ಅವಧೇಶ್ ಪಾಸ್ವಾನ್ ವಿಶೇಷ ಚೇತನರಾಗಿದ್ದಾರೆ. ಅಂಗವೈಕಲ್ಯದ ಹೊರತಾಗಿಯೂ ಅವರು ಚಂಡೀಗಢದ ವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೆ ಅಂಗವೈಕಲ್ಯದಿಂದಾಗಿ ಕುಟುಂಬದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ. ಹಳ್ಳಿಯ ಪ್ರದೀಪ್ ಕುಮಾರ್ ಎಂಬುವವರು ಅವಧೇಶ್ ಅವರ ಮನೆಯ ಪರಿಸ್ಥಿತಿಯ ವಿಡಿಯೋವನ್ನು ಟ್ವಿಟರ್ನಲ್ಲಿ ಸೋನು ಸೂದ್ ಮತ್ತು ಅವರ ಸಂಘಟನೆಯ ಗೋವಿಂದ್ ಅಗರ್ವಾಲ್ ಅವರಿಗೆ ಟ್ಯಾಗ್ ಮಾಡಿದ್ದರು. ಇ-ರಿಕ್ಷಾ ಅಥವಾ ಆಟೋಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರು.
ಇದನ್ನು ಅರಿತ ಸೋನು ಸೂದ್ ಕೂಡಲೇ ತಮ್ಮ ಟ್ವಿಟರ್ನಲ್ಲಿ ವಿಡಿಯೋ ಟ್ಯಾಗ್ ಮಾಡಿ ಇ-ರಿಕ್ಷಾಗಳನ್ನು ಬಿಹಾರಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈಗ ಇ-ರಿಕ್ಷಾ ಅವಧೇಶ್ ಅವರಿಗೆ ಹಸ್ತಾಂತರವಾಗಿದೆ. ಇದರಿಂದ ಜೀವನೋಪಾಯದ ಆತಂಕದಲ್ಲಿದ್ದ ಅವಧೇಶ್ ಕುಟುಂಬಕ್ಕೆ ಆಸರೆ ದೊರೆತಂತಾಗಿದೆ.