ಹೈದರಾಬಾದ್: ಕೊರೊನಾ ವೈರಸ್ನ ಎರಡನೇ ಅಲೆಯು ಸುನಾಮಿಯಂತೆ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ ಮತ್ತು ಸಾವುಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಕೊರೊನಾವನ್ನು ಸೋಲಿಸಿ ಚೇತರಿಸಿಕೊಳ್ಳುತ್ತಿರುವ ಕೆಲವು ರೋಗಿಗಳಲ್ಲಿ, ಮ್ಯೂಕೋರಮೈಕೋಸಿಸ್ ಅಂದರೆ ಕಪ್ಪು ಶಿಲೀಂಧ್ರ ಕಂಡು ಬರುತ್ತಿದೆ. ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಹಾಗೂ ಕರ್ನಾಟಕದ ಕೆಲವೆಡೆಯೂ ಕಪ್ಪು ಶಿಲೀಂಧ್ರ ಪ್ರಕರಣಗಳು ಕಂಡುಬಂದಿದೆ.
ಈಗಾಗಲೇ ಸೋಂಕಿನಿಂದ ಬಳಲುತ್ತಿರುವ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಔಷಧವನ್ನು ತೆಗೆದುಕೊಳ್ಳುವ ಜನರಿಗೆ ಇದು ಹೆಚ್ಚಾಗಿ ದಾಳಿ ಮಾಡುತ್ತದೆ. ಇದು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು.
ದೃಷ್ಟಿಯ ಮೇಲೆ ಪರಿಣಾಮ ಬೀರುವ ಕಪ್ಪು ಶಿಲೀಂಧ್ರ:
ಕೊರೊನಾ ಸೋಂಕಿತರಲ್ಲಿ ಕೆಲವರು ಕಪ್ಪು ಶಿಲೀಂಧ್ರದ ಅಡ್ಡಪರಿಣಾಮವಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇದು ಸ್ಟೀರಾಯ್ಡ್ಗಳು ಮತ್ತು ಟೊಸಿಲಿಜುಮಾಬ್ ಚುಚ್ಚುಮದ್ದಿನಿಂದಾಗಿ ಕೊರೊನಾ ರೋಗಿಗಳನ್ನು ಆವರಿಸುತ್ತಿದೆ. ಈ ಶಿಲೀಂಧ್ರದಿಂದಾಗಿ ವಿವಿಧ ರಾಜ್ಯಗಳ ಅನೇಕ ಜನರು ದೃಷ್ಟಿ ಕಳೆದುಕೊಂಡಿದ್ದಾರೆ.
ರೋಗಲಕ್ಷಣಗಳು ಯಾವುವು?
ಈ ರೋಗದ ಲಕ್ಷಣಗಳು ಸೋಂಕಿಗೆ ಒಳಗಾದ ಭಾಗಗಳ ಮೇಲೆ ನಿರ್ಧರಿತವಾಗುತ್ತದೆ. ಮುಖದ ಒಂದು ಬದಿಯ ಊತ, ತಲೆನೋವು, ಮೂಗಿನ ಸುತ್ತ ಊತ, ವಾಂತಿ, ಜ್ವರ, ಎದೆ ನೋವು, ವಿಪರೀತ ಸೈನಸ್, ಬಾಯಿಯ ಮೇಲಿನ ಭಾಗ ಅಥವಾ ಮೂಗಿನಲ್ಲಿ ಕಪ್ಪು ಹುಣ್ಣುಗಳು, ಕಣ್ಣು ಅಥವಾ ಮೂಗಿನ ಸುತ್ತ ನೋವು ಮತ್ತು ಕೆಂಪಾಗುವುದು ಇದರ ಸಾಮಾನ್ಯ ಲಕ್ಷಣಗಳಾಗಿವೆ.
ಕೊರೊನಾ ರೋಗಿಗಳಿಗೆ ಏಕೆ ಬರುತ್ತದೆ?
ಕೊರೊನಾದಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಕಪ್ಪು ಶಿಲೀಂಧ್ರ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಬಹಳ ಮುಖ್ಯವಾಗಿ ಸ್ಟೀರಾಯ್ಡ ಔಷಧಗಳು ದೇಹದ ಪ್ರತೀ ರಕ್ಷಣ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುತ್ತದೆ. ಇದು ಇಂತಹ ಸೋಂಕಿಗೆ ನಮ್ಮ ದೇಹ ಸುಲಭವಾಗಿ ತುತ್ತಾಗಲು ಎಡೆಮಾಡಿಕೊಡುತ್ತದೆ. ಆದರೆ, ರೋಗನಿರೊಧಕ ಶಕ್ತಿ ಹೆಚ್ಚು ಇದ್ದರೆ ಇದು ಕಾಣಿಸಿಕೊಳ್ಳುವುದಿಲ್ಲ.
ಸ್ಟೀರಾಯ್ಡ್ ನೀಡಲು ಪ್ರೋಟೋಕಾಲ್:
ಪ್ರಸ್ತುತ ರೋಗಿಗಳ ಆಮ್ಲಜನಕದ ಮಟ್ಟವನ್ನು ಕಾಪಾಡಿಕೊಳ್ಳಲು ವೈದ್ಯರು ಸ್ಟೀರಾಯ್ಡ್ನ ಅನಿಯಂತ್ರಿತ ಚುಚ್ಚುಮದ್ದನ್ನು ನೀಡುತ್ತಿದ್ದಾರೆ. ರೋಗಿಯ ದೇಹದಲ್ಲಿ ಸ್ಟೀರಾಯ್ಡ್ ಪ್ರಮಾಣ ಹೆಚ್ಚಿದಂತೆ ಶಿಲೀಂಧ್ರಗಳ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ. ಈಗ ಈ ರೋಗವು ಮಾರಕವಾಗಿ ಹರಡುತ್ತಿದ್ದು ರೋಗಿಗಳಿಗೆ ಎಷ್ಟು ಸ್ಟೀರಾಯ್ಡ್ ನೀಡಬೇಕು ಎಂಬುದರ ಕುರಿತು ಪ್ರೋಟೋಕಾಲ್ ತಯಾರಿಸಲಾಗುವುದು.
ಇಂದೋರ್-ಭೋಪಾಲ್‌ನಲ್ಲಿ ಏರಿಕೆ ಕಂಡ ಕಪ್ಪು ಶಿಲೀಂಧ್ರ ರೋಗಿಗಳ ಸಂಖ್ಯೆ:
ಇಂದೋರ್ನಲ್ಲಿ ಸುಮಾರು 11 ರೋಗಿಗಳು ಈ ಸೋಂಕಿಗೆ ತುತ್ತಾಗಿದ್ದಾರೆ. 4 ರೋಗಿಗಳನ್ನು ಉಳಿಸಲು, ಅವರು ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದು, ಕಣ್ಣುಗಳನ್ನು ತೆಗೆಯಲು ಸಿದ್ಧತೆಗಳನ್ನು ಸಹ ಮಾಡಲಾಗಿದೆ. ಕಪ್ಪು ಶಿಲೀಂಧ್ರದಿಂದ ಬಳಲುತ್ತಿರುವ 2 ರೋಗಿಗಳನ್ನು ಎಂವೈ ಆಸ್ಪತ್ರೆಗೆ ಮತ್ತು 2 ರೋಗಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೇತ್ರಶಾಸ್ತ್ರಜ್ಞ ಡಾ. ಶ್ವೇತಾ ವಾಲಿಯಾ ಅವರ ಪ್ರಕಾರ, ಕಳೆದ ಒಂದು ತಿಂಗಳಲ್ಲಿ, ಇಂತಹ 35ಕ್ಕೂ ಹೆಚ್ಚು ರೋಗಿಗಳು ನನ್ನ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಭೋಪಾಲ್‌ನಲ್ಲಿ ಸುಮಾರು 10 ದಿನಗಳಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 50 ರೋಗಿಗಳು ಪತ್ತೆಯಾಗಿದ್ದಾರೆ. ಆರೋಗ್ಯ ಇಲಾಖೆ ಅವರ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಲೀಂಧ್ರದ ಹಿಡಿತದಲ್ಲಿ ದೆಹಲಿ:
ಕೊರೊನಾ ಸೋಂಕಿನ ಅಪಾಯದ ನಡುವೆ 'ಕಪ್ಪು ಶಿಲೀಂಧ್ರ'ದ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ದೆಹಲಿಯ ಆಸ್ಪತ್ರೆಗಳಲ್ಲಿ ಈ ರೋಗದ ಪ್ರಕರಣಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ಈ ರೋಗವು ನೇರವಾಗಿ ಕಣ್ಣಿನ ದೃಷ್ಠಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಪ್ಪು ಶಿಲೀಂಧ್ರಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಅದು ರೋಗಿಯ ಸಾವಿಗೆ ಕಾರಣವಾಗುತ್ತದೆ.
ಮಹಾರಾಷ್ಟ್ರದಲ್ಲಿ ಕಪ್ಪು ಶಿಲೀಂಧ್ರದಿಂದ 8 ಜನರು ಸಾವು:
ಮಹಾರಾಷ್ಟ್ರದಲ್ಲೂ ಮ್ಯೂಕೋರಮೈಕೋಸಿಸ್ ಪ್ರಕರಣಗಳು, ಅಂದರೆ ಕಪ್ಪು ಶಿಲೀಂಧ್ರ ಪ್ರಕರಣಗಳು ನಿರಂತರವಾಗಿ ಕಂಡು ಬರುತ್ತಿದೆ. ಶಿಲೀಂಧ್ರದಿಂದ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಈ ರೋಗಿಗಳು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, ರಾಜ್ಯದಲ್ಲಿ ಸುಮಾರು 200 ಶಿಲೀಂಧ್ರ ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯದ ಮುಖ್ಯಸ್ಥ ಡಾ.ತತ್ಯರಾವ್ ಲಾಹೆನ್ ಅವರ ಪ್ರಕಾರ, ಮ್ಯೂಕೋರಮೈಕೋಸಿಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.
ಗುಜರಾತ್‌ನಲ್ಲಿ ಕಪ್ಪು ಶಿಲೀಂಧ್ರದ ಪ್ರಕರಣಗಳಲ್ಲಿ ಹೆಚ್ಚಳ:
ಗುಜರಾತ್‌ನಲ್ಲೂ ಕೊರೊನಾ ಸೋಂಕಿನಿಂದ ಗುಣಮುಖರಾದ ಜನರಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. ಶಿಲೀಂಧ್ರದಿಂದಾಗಿ ಜನರು ದೃಷ್ಟಿ ಕಳೆದುಕೊಳ್ಳುವ ಸಂದರ್ಭವೂ ಇಲ್ಲಿ ಕಂಡುಬರುತ್ತಿದೆ. ಸೂರತ್ ಮತ್ತು ಗುಜರಾತ್‌ನ ಇತರ ಪ್ರದೇಶಗಳಲ್ಲಿ ಮ್ಯೂಕಾರ್ಮೈಕೋಸಿಸ್ ಸೋಂಕು ಕಂಡುಬಂದಿದೆ. ಗುಜರಾಜ್‌ನಲ್ಲಿ 7 ಶಿಲೀಂಧ್ರ ರೋಗಿಗಳು ದೃಷ್ಟಿ ಕಳೆದುಕೊಂಡಿದ್ದಾರೆ. ಇತರ 60 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.