ಜೈಪುರ (ರಾಜಸ್ಥಾನ) : ರಾಜಸ್ಥಾನ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಮೊದಲ ಆಘಾತ ಅನುಭವಿಸಿದೆ. ಕರಣ್ಪುರ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಚುನಾವಣೆಗೂ ಮೊದಲೇ ಸಚಿವರಾಗಿ ಘೋಷಿತವಾಗಿದ್ದ ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್ ಸೋಲು ಕಂಡಿದ್ದಾರೆ.
ಸಾರ್ವತ್ರಿಕ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕುನ್ನಾರ್ ನಿಧನರಾಗಿದ್ದರು. ಇದರಿಂದ ಈ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಜನವರಿ 5 ರಂದು ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮತದಾನ ನಡೆಸಲಾಗಿತ್ತು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಸಚಿವ ಸುರೇಂದ್ರ ಪಾಲ್ ಸಿಂಗ್ ಪರಾಜಯ ಕಂಡು ಆಘಾತ ಅನುಭವಿಸಿದ್ದಾರೆ.
'ಕೈ' ಹಿಡಿದ ಅನುಕಂಪ: ಸಾರ್ವತ್ರಿಕ ಚುನಾವಣೆಯ ವೇಳೆ ಮೃತಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕುನ್ನಾರ್ ಅವರ ಪುತ್ರ ರೂಪೀಂದರ್ ಸಿಂಗ್ ಕುನ್ನಾರ್ರನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಅನುಕಂಪದ ಆಧಾರದ ಮೇಲೆ ಮತ ಕೇಳಿದ್ದ ರೂಪೀಂದರ್ ಕ್ಷೇತ್ರದ ಜನರ ಆಶೀರ್ವಾದ ಪಡೆದಿದ್ದಾರೆ. ಕುನ್ನಾರ್ 64,401 ಮತಗಳನ್ನು ಪಡೆದರೆ, ಸಚಿವ ಸುರಿಂದರ್ ಪಾಲ್ ಸಿಂಗ್ 54,546 ಮತಗಳನ್ನು ಪಡೆದಿದ್ದಾರೆ. ಅನುಕಂಪದ ಅಲೆಯ ಮುಂದೆ ಸಚಿವರ ಖ್ಯಾತಿ ಮರೆಯಾಗಿದೆ.
ಚುನಾವಣೆಗೂ ಮೊದಲೇ ಸಚಿವ ಸ್ಥಾನ ಘೋಷಣೆ: ಕರಣ್ಪುರ ವಿಧಾನಸಭೆಗೆ ಆಯೋಗ ಜನವರಿ 5 ರಂದು ಚುನಾವಣೆ ದಿನಾಂಕ ಘೋಷಿಸಿತ್ತು. ಅದಕ್ಕೂ ಮೊದಲೇ ಸಿಎಂ ಭಜನ್ಲಾಲ್ ಸರ್ಕಾರ ಸುರಿಂದರ್ ಪಾಲ್ ಸಿಂಗ್ ಅವರನ್ನು ಸಚಿವರನ್ನಾಗಿ ಮಾಡಿತ್ತು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾತ್ರವಲ್ಲ ಸರ್ಕಾರದ ಸಚಿವರನ್ನು ಗೆಲ್ಲಿಸಬೇಕು ಎಂದು ಪಕ್ಷ ಭರ್ಜರಿ ಪ್ರಚಾರ ಮಾಡಿತ್ತು. ಭಜನ್ ಲಾಲ್ ಸರ್ಕಾರದಲ್ಲಿ ಸುರಿಂದರ್ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾಗಿದ್ದರು. ನಾಲ್ಕು ಪ್ರಮುಖ ಖಾತೆಗಳನ್ನೂ ಪಡೆದುಕೊಂಡಿದ್ದರು.
ಚುನಾವಣೆಗೂ ಮೊದಲೇ ಬಿಜೆಪಿ ಅಭ್ಯರ್ಥಿಯನ್ನು ಸಚಿವರನ್ನಾಗಿ ಘೋಷಿಸಿದ್ದರ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಮಾಜಿ ಸಿಎಂ ಗೆಹ್ಲೋಟ್ ಅಭಿನಂದನೆ: ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗೆಲುವು ಸಾಧಿಸಿದ ಕುನ್ನಾರ್ ಅವರನ್ನು ಅಭಿನಂದಿಸಿದರು. ಚುನಾವಣಾ ಸಮಯದಲ್ಲಿ ಅಭ್ಯರ್ಥಿಯನ್ನು ಮಂತ್ರಿ ಮಾಡುವ ಮೂಲಕ ಬಿಜೆಪಿ ನೀತಿ ಸಂಹಿತೆ ಮತ್ತು ನೈತಿಕತೆಯನ್ನು ಉಲ್ಲಂಘಿಸಿತ್ತು. ಇದಕ್ಕೆ ಸಾರ್ವಜನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದು ಗೆಹ್ಲೋಟ್ ಟೀಕಿಸಿದ್ದಾರೆ.
ಇದನ್ನೂ ಓದಿ: 5ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ಶೇಖ್ ಹಸೀನಾ