ಲಖನೌ(ಉತ್ತರಪ್ರದೇಶ): ಉತ್ತರಪ್ರದೇಶ ವಿಧಾನಸಭೆಗೆ 2ನೇ ಹಂತದ ಮತದಾನ ಆರಂಭವಾಗಿದೆ. ಈ ಮಧ್ಯೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ 80:20 ಹೋರಾಟ ನಡೆಯುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು 80 ಪ್ರತಿಶತ ಜನರು ಮೆಚ್ಚಿದ್ದರೆ ಶೇ.20 ರಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಹುಜನರ ಬೆಂಬಲವಿರುವ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.
ಮೊದಲ ಹಂತದ ಮತದಾನದಲ್ಲಿ ಬಿಜೆಪಿಗೆ ಭಾರಿ ಬೆಂಬಲ ಉಂಟಾದ ಬಳಿಕ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಪಕ್ಷಗಳು ನಿರಾಸೆಗೊಂಡಿವೆ. ಅಲ್ಲದೇ, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ರಾಜ್ಯದಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತದ ಮತದಾನದ ಬಳಿಕ ಬಿಜೆಪಿ ಸಣ್ಣಗಾಗಿದೆ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್ ಅವರು, ನಮ್ಮ ಕೆಲಸ ಮತ್ತು ಉದ್ದೇಶ ಎರಡೂ ದೃಢವಾಗಿವೆ. ವಿಪಕ್ಷಗಳು ಏನೇ ತೆಗಳಿದರೂ ಜನರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕಾಗಿಯೇ 80:20 ಅನುಪಾತದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಬಹುಸಂಖ್ಯಾತರು ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಬೇಕು ಎಂದು ಇಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋವಾ, ಯುಪಿ, ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಮತದಾನ ಆರಂಭ