ಚೆನ್ನೈ (ತಮಿಳುನಾಡು): ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಿಜೆಪಿಯು 73 ಸ್ಥಾನಗಳನ್ನು ಹೊಂದಿರುವ ರಾಜಸ್ಥಾನದಿಂದ ಸಂಸತ್ತಿನ ಮೇಲ್ಮನೆಗೆ ಆಯ್ಕೆ ಮಾಡುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.
ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು 2019ರ ಮೇ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ತಮಿಳುನಾಡು ಬಿಜೆಪಿಯ ಹೊಣೆ ವಹಿಸಿಕೊಂಡ ದಿನದಿಂದಲೂ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ಹೆಚ್ಚು ಆಕ್ರಮಣಕಾರಿಯಾದ ವಾಗ್ದಾಳಿ ಮಾಡುತ್ತಾ ಹಲವಾರು ಜನ ಕೇಂದ್ರಿತ ಸಮಸ್ಯೆಗಳ ಬಗ್ಗೆಯೂ ಅವರು ಪ್ರಶ್ನೆ ಎತ್ತುತ್ತಿದ್ದಾರೆ.
ಮುಂದಿನ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಗೆ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಲಾಗಿದೆ. ಬ್ರಿಕ್ಸ್ ರಾಜಕೀಯ ಪಕ್ಷಗಳು ಜೊತೆಗೆ ಸಂವಾದಕ್ಕೆ ನಾಲ್ಕು ಸದಸ್ಯರ ಬಿಜೆಪಿ ನಿಯೋಗವನ್ನು ನೇಮಕ ಮಾಡಿದ್ದು, ಇದರಲ್ಲಿ ಅಣ್ಣಾಮಲೈ ಸಹ ಒಬ್ಬರಾಗಿದ್ದಾರೆ. ಈ ಹಿಂದೆ ಲಂಡನ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲೂ ಅವರು ಭಾಷಣಕಾರರಾಗಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಮುಕ್ತಾಯವಾದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ರಾಜ್ಯ ಸಹ ಉಸ್ತುವಾರಿ ಆಗಿಯೂ ಅಣ್ಣಾಮಲೈ ಕೆಲಸ ಮಾಡಿದ್ದರು. ಇದೇ ಜುಲೈ 28ರಿಂದ ತಮಿಳುನಾಡಿನಾದ್ಯಂತ ಅಣ್ಣಾಮಲೈ 'ಎನ್ ಮಣ್ ಎನ್ ಮಕ್ಕಳ್' ಎಂಬ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ರಾಮೇಶ್ವರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಚೆನ್ನೈ ಮೂಲದ ಚಿಂತಕರ ಚಾವಡಿಯಾದ ನೀತಿ ಮತ್ತು ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಸಿ.ರಾಜೀವ್ ಮಾತನಾಡಿ, ಅಣ್ಣಾಮಲೈ ಬಿಜೆಪಿಯ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷರಾದಾಗಿನಿಂದ ಪಕ್ಷವು ಹೆಚ್ಚು ಬೆಳೆದಿದೆ. ಆಕ್ರಮಣಕಾರಿ ಮತ್ತು ಆಡಳಿತಾರೂಢ ಡಿಎಂಕೆ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕೈಗೆತ್ತಿಕೊಳ್ಳುವುದು ಸೇರಿದಂತೆ ಹಲವಾರು ಜನ ಕೇಂದ್ರಿತ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಅಣ್ಣಾಮಲೈ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದರೆ, ಅದು ರಾಜ್ಯದಲ್ಲಿ ಬಿಜೆಪಿಯ ಭವಿಷ್ಯಕ್ಕೆ ದೊಡ್ಡ ಬಲವನ್ನು ನೀಡುತ್ತದೆ ಎಂಬುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಕರ್ನಾಟಕವನ್ನು ಏಕೆ ಖಂಡಿಸಿಲ್ಲ? ಸಿಎಂ ಸ್ಟಾಲಿನ್ಗೆ ಅಣ್ಣಾಮಲೈ ಪ್ರಶ್ನೆ