ಪಣಜಿ : ಗೋವಾ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಪ್ರಣಾಳಿಕೆಯನ್ನು ಪಟ್ಟಿ ಮಾಡಿದೆ. ಮೂರು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ವಸತಿ ಸಚಿವ ನಿತಿನ್ ಗಡ್ಕರಿ ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ನಾವು ನಮ್ಮ ಪ್ರಣಾಳಿಕೆಗೆ ಬದ್ಧರಾಗಿದ್ದೇವೆ, ನಾವು ಹಿಂದಿನ ಪ್ರಣಾಳಿಕೆಗಳಲ್ಲಿ ಶೇ.80ರಷ್ಟನ್ನು ಪೂರ್ಣಗೊಳಿಸಿದ್ದೇವೆ. ಈ ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರಲು ನಮ್ಮ ಡಬಲ್ ಎಂಜಿನ್ ಸರ್ಕಾರ್ ಬದ್ಧವಾಗಿದೆ ಎಂದರು.
ಉಚಿತ ಗ್ಯಾಸ್ ಸಿಲಿಂಡರ್ ಜೊತೆಗೆ ಮುಂದಿನ ಐದು ವರ್ಷಗಳವರೆಗೆ ರಾಜ್ಯ ಸರ್ಕಾರವು ವಿಧಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸಿಕೊಡುವುದಾಗಿಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Punjab Polls: ಪಂಜಾಬ್ನಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ ಚುನಾವಣಾ ರ‍್ಯಾಲಿ
ಗೋವಾವನ್ನು ಅಂತಾರರಾಷ್ಟ್ರೀಯ ಫುಟ್‌ಬಾಲ್ ತಾಣವನ್ನಾಗಿ ಮಾಡುವ ಮತ್ತು ರಾಜ್ಯದ ಆರ್ಥಿಕತೆಯನ್ನು 50 ಶತಕೋಟಿ ಡಾಲರ್ಗೆ ಹೆಚ್ಚಿಸಿ ಗೋವಾವನ್ನು ಆರ್ಥಿಕತೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ ಭರವಸೆ ನೀಡಿದೆ.
ಫೆಬ್ರವರಿ 14ರಂದು ಒಂದೇ ಹಂತದಲ್ಲಿ 40 ಸ್ಥಾನಗಳಿಗೆ ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಸುತ್ತಿದೆ.