ಜೈಪುರ(ರಾಜಸ್ಥಾನ): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಎರಡನೇ ಪಟ್ಟಿಯಲ್ಲೂ ತಮ್ಮ ನಾಯಕರಿಗೆ ಅವಕಾಶ ಸಿಗದ್ದಕ್ಕೆ ಕಾರ್ಯಕರ್ತರು, ಬೆಂಬಲಿಗರು ತೀವ್ರ ಗದ್ದಲವೆಬ್ಬಿಸಿದ್ದಾರೆ. ಅಲ್ಲದೇ, ರಾಜ್‌ಸಮಂದ್‌ನಲ್ಲಿರುವ ಪಕ್ಷದ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಚಿತ್ತೋರಗಢದಲ್ಲಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ಅವರ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ.
ರಾಜ್‌ಸಮಂದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ದೀಪ್ತಿ ಮಹೇಶ್ವರಿ ಅವರನ್ನು ಕಣಕ್ಕಿಳಿಸಿರುವುದರ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರವನ್ನು ಪ್ರತಿನಿಧಿಸದ ಅಭ್ಯರ್ಥಿಗೆ ಮಣೆ ಹಾಕಿದ್ದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಪಕ್ಷದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಕರ್ತರಿಂದ ಪ್ರತಿಭಟನೆ: ಹೊರಗಿನ ಅಭ್ಯರ್ಥಿಗೆ ಮಣೆ ಹಾಕಲಾಗಿದೆ ಎಂದು ನಿರಾಶೆಗೊಂಡ ಪಕ್ಷದ ಕಾರ್ಯಕರ್ತರು ಜೈಪುರ, ರಾಜ್‌ಸಮಂದ್, ಚಿತ್ತೋರ್‌ಗಢ, ಅಲ್ವಾರ್, ಬುಂದಿ ಮತ್ತು ಉದಯಪುರದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಕಂಕ್ರೋಳಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಕಾರ್ಯಕರ್ತರು ನುಗ್ಗಿ ಧ್ವಂಸ ಮಾಡಿದರು.
ಚಿತ್ತೋಡಗಢ ಶಾಸಕ ಚಂದ್ರಭಾನ್ ಸಿಂಗ್ ಅಕ್ಯಾ ಅವರಿಗೆ ಟಿಕೆಟ್ ತಪ್ಪಿಸಿದ್ದಕ್ಕೆ ಚಿತ್ತೋರಗಢದಲ್ಲಿ ಪ್ರತಿಭಟನೆಗಳು ನಡೆದಿವೆ. ಇದೇ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ರಾಜ್ಯಾಧ್ಯಕ್ಷರ ವಿರುದ್ಧ ಆಕ್ರೋಶ: ಬಿಜೆಪಿ ರಾಜ್ಯಾಧ್ಯಕ್ಷ ಸಿ.ಪಿ.ಜೋಶಿ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಟಿಕೆಟ್ ವಂಚಿತ ಚಂದ್ರಭಾನ್ ಸಿಂಗ್ ಅಕ್ಯಾ, ಜೋಶಿ ಎನ್ಎಸ್ಯುಐನಲ್ಲಿದ್ದಾಗ, ನಾನು ಎಬಿವಿಪಿ ಕಾರ್ಯಕರ್ತನಾಗಿದ್ದೆ. ಅಂದಿನಿಂದ ಅವರ ಮತ್ತು ನನ್ನ ನಡುವೆ ವಾದ ನಡೆಯುತ್ತಲೇ ಇದೆ. ನನಗೆ ಟಿಕೆಟ್ ಸಿಗದಂತೆ ಮಾಡಿದ್ದಕ್ಕೆ ಜೋಶಿ ಅವರಿಗೆ ಧನ್ಯವಾದ ಸಲ್ಲಿಸುವೆ. ಇನ್ನು ಮುಂದೆ ಎಲ್ಲವನ್ನೂ ಜನರೇ ನಿರ್ಧರಿಸಲಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದರೂ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದ್ದರಿಂದ ರಾಜ್ಯಾಧ್ಯಕ್ಷ ಸಿ.ಪಿ.ಜೋಶಿ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಇದೇ ವೇಳೆ ಚಿತ್ತೋರ್‌ಗಢ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯಾಧ್ಯಕ್ಷರ ಪ್ರತಿಕೃತಿ ದಹಿಸಿದ್ದಾರೆ. ಮಧುವನ ಕಾಲೋನಿಯಲ್ಲಿರುವ ರಾಜ್ಯಾಧ್ಯಕ್ಷರ ಇನ್ನೊಂದು ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನವೆಂಬರ್ 23 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ.