ಕೇರಳ : ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಮಂಜೇಶ್ವರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಕೆ. ಸುಂದರ್ ಅವರಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಹಣ ಮತ್ತು ಸ್ಮಾರ್ಟ್‌ಫೋನ್ ನೀಡಲಾಗಿತ್ತು ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳಲು ನಾನು 15 ಲಕ್ಷ ರೂ. ಕೇಳಿದೆ. ಆದರೆ, ಅವರು 2.5 ಲಕ್ಷ ರೂ. ಮತ್ತು ಸ್ಮಾರ್ಟ್‌ಫೋನ್ ನೀಡಿದರು ಎಂದು ಸುಂದರ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಂಜೇಶ್ವರದ ಎನ್‌ಡಿಎ ಅಭ್ಯರ್ಥಿ ಕೆ ಸುರೇಂದ್ರನ್ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಹಣ ನೀಡುವ ಕುರಿತು ಮಾತನಾಡಿದ್ರು.
ನಂತರ ಸ್ಥಳೀಯ ಬಿಜೆಪಿ ಮುಖಂಡರು ಮನೆಯಲ್ಲಿ ನನಗೆ ಹಣ ಹಾಗೂ ಸ್ಮಾರ್ಟ್‌ಫೋನ್ ನೀಡಿದ್ರು. ಸುರೇಂದ್ರನ್ ಗೆದ್ದರೆ, ಅವರು ಮಂಗಳೂರಿನಲ್ಲಿ ವೈನ್ ಶಾಪ್ ನೀಡುವ ಭರವಸೆ ನೀಡಿದರು ಎಂದು ಸುಂದರ ಹೇಳಿದ್ರು.
ಸುಂದರ ಅವರು ಮಂಜೇಶ್ವರ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ನಂತರ ಅದನ್ನು ಹಿಂತೆಗೆದುಕೊಂಡಿದ್ದರು. ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬಿಜೆಪಿ ನಾಯಕರು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಸ್ವತಃ ಸುಂದರ ಅವರೇ ಬಹಿರಂಗಪಡಿಸಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ ಏನು?
ಸುಂದರ ಅವರ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಸುಂದರ ಅವರ ಹೇಳಿಕೆಯ ಹಿಂದೆ ಪಿತೂರಿ ಇದೆ ಎಂದು ಬಿಜೆಪಿ ಆರೋಪಿಸಿದೆ.