ಅಯೋಧ್ಯೆ(ಉತ್ತರ ಪ್ರದೇಶ) : ಇಲ್ಲಿನ ಪೊಲೀಸರು ಬಿಜೆಪಿ ಶಾಸಕರ ಪುತ್ರನ ವಿರುದ್ಧ ದರೋಡೆ ಮತ್ತು ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯ ಖಂಡಸಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಗ್ರಾಮದ ನಿವಾಸಿ ಶ್ಯಾಮ್ ಬಹದ್ದೂರ್ ಸಿಂಗ್ ನೀಡಿದ ದೂರಿನ ಮೇರೆಗೆ ಫೈಜಾಬಾದ್‌ನ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಘಟನೆ: ಸೋಮವಾರ ತಡರಾತ್ರಿ ವಾಹನವೊಂದರಲ್ಲಿ ಬಂದ ನಾಲ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ರೂರವಾಗಿ ಥಳಿಸಿದ ಮೆಲೆ ನಾಲ್ವರಲ್ಲಿ ಒಬ್ಬರು ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಪಿಸ್ತೂಲ್ ಗುರಿಯಿಟ್ಟು ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು ಎಂದು ಶ್ಯಾಮ್ ಬಹದ್ದೂರ್ ಸಿಂಗ್ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ನಿವೃತ್ತ ನ್ಯಾಯಮೂರ್ತಿ ಮನೆಯಲ್ಲಿ ಕಳ್ಳತನ.. ಅಲ್ಲೇ ಪಾರ್ಟಿ ಮಾಡಿದ ಖದೀಮರು!
ತಲೆಗೆ ಪಿಸ್ತೂಲ್ ಗುರಿಯಿಟ್ಟು ಅವರು ನನ್ನ ಬಳಿಯಿದ್ದ ಒಂದು ಲಕ್ಷ ನಗದು ಹಾಗೂ ಕೆಲವು ದಾಖಲೆ ಪತ್ರಗಳಿದ್ದ ಬ್ಯಾಗ್ ಅನ್ನು ಕಸಿದುಕೊಂಡರು. ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡಾಗ ಅಲ್ಲಿದ್ದ ಜನರು ದೌಡಾಯಿಸಿದರು. ಜನ ಬರುತ್ತಿದ್ದಂತೆ ದರೋಡೆಕೋರರು ಪರಾರಿಯಾಗಿದರು. ಈ ವೇಳೆ ಆ ವಾಹನವನ್ನು ರುದೌಲಿ ಬಿಜೆಪಿ ಶಾಸಕ ರಾಮಚಂದ್ರ ಯಾದವ್ ಅವರ ಪುತ್ರ ಅಲೋಕ್ ಯಾದವ್ ಚಲಾಯಿಸುತ್ತಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲ ದೃಶ್ಯಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ದುರ್ಘಟನೆ ನಡೆದರೆ ಅದಕ್ಕೆ ರುದೌಲಿ ಶಾಸಕ ರಾಮಚಂದ್ರ ಯಾದವ್ ಹೊಣೆಯಾಗುತ್ತಾರೆ ಎಂದು ಸಿಂಗ್ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ. ಮಂಗಳವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಯೋಧ್ಯೆ ಎಸ್‌ಎಸ್‌ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ.