ಲಖನೌ: 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾವು ಉತ್ತರ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಮುಂದಿನ ವಾರ 'ಶುಕ್ರಿಯಾ ಮೋದಿ ಭಾಯಿಜಾನ್' ಅಭಿಯಾನವನ್ನು ಪ್ರಾರಂಭಿಸಲಿದೆ.
"ನಾ ದೂರಿ ಹೈ, ನಾ ಖೈ ಹೈ, ಮೋದಿ ಹಮಾರಾ ಭಾಯಿ ಹೈ" (ನಮ್ಮ ನಡುವೆ ಅಂತರವಿಲ್ಲ, ಕಂದಕವಿಲ್ಲ, ಮೋದಿ ನಮ್ಮ ಸಹೋದರ) ಎಂಬ ಘೋಷವಾಕ್ಯದೊಂದಿಗೆ ಈ ಅಭಿಯಾನದ ಮೂಲಕ ಕನಿಷ್ಠ 1,000 ಮುಸ್ಲಿಂ ಮಹಿಳೆಯರನ್ನು ಭಾರತೀಯ ಜನತಾ ಪಕ್ಷದತ್ತ ಸೆಳೆಯುವ ಗುರಿ ಹೊಂದಲಾಗಿದೆ.
ಉತ್ತರ ಪ್ರದೇಶದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕುನ್ವರ್ ಬಸಿತ್ ಅಲಿ ಮಾತನಾಡಿ, "ಶುಕ್ರಿಯಾ ಮೋದಿ ಭಾಯಿಜಾನ್ ಅಭಿಯಾನದ ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಮಹಿಳೆಯರಿಗೆ ಮಾಡಿದ ಕೆಲಸದ ಬಗ್ಗೆ ತಿಳಿಸಿ ಕೊಡಲಾಗುವುದು ಮತ್ತು ಬಿಜೆಪಿಗೆ ಮತ ಹಾಕುವಂತೆ ಪ್ರೋತ್ಸಾಹಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಆದ್ಯತೆ ನೀಡುವ ಮೂಲಕ ಸಹೋದರ-ಸಹೋದರಿ ಸಂಬಂಧವನ್ನು ಸ್ಥಾಪಿಸಿದ್ದಾರೆ, ಆದ್ದರಿಂದ ಈ ಅಭಿಯಾನಕ್ಕೆ 'ಶುಕ್ರಿಯಾ ಮೋದಿ ಭಾಯಿಜಾನ್' ಎಂದು ಹೆಸರಿಡಲಾಗಿದೆ" ಎಂದರು.
ಈ ಅಭಿಯಾನದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಮುಸ್ಲಿಂ ಮಹಿಳೆಯರು ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಇತರೆ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಂತೆ ಪ್ರಯತ್ನಿಸಲಾಗುವುದು. ಜನವರಿ 2 ರಿಂದ ಅಭಿಯಾನ ಆರಂಭವಾಗಲಿದ್ದು, ಜ.20ರವರೆಗೆ ನಡೆಯಲಿದೆ ಎಂದು ಅಲಿ ಹೇಳಿದರು.
ಇದನ್ನೂ ಓದಿ: ಜನವರಿ 22ರಂದು ಪ್ರತಿ ಮನೆಗಳಲ್ಲೂ 'ಶ್ರೀರಾಮ ಜ್ಯೋತಿ' ಬೆಳಗಿಸಿ: ಮೋದಿ ಮನವಿ
"ಇತ್ತೀಚೆಗೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಸ್ಲಿಂ ಮಹಿಳೆಯರು ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರವೃತ್ತಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿ ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 'ಶುಕ್ರಿಯಾ ಮೋದಿ ಭಾಯಿಜಾನ್' ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ" ಎಂದರು.