ಪಣಜಿ (ಗೋವಾ): ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಗೋವಾದಲ್ಲಿ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಫೋಗಟ್ ತಮ್ಮ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಂಜುನಾದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ಫೋಗಟ್, ಹರಿಯಾಣದ ಫತೇಹಾಬಾದ್‌ನ ಭೂತಾನ್ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಹರಿಯಾಣದಿಂದ ಆದಂಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಕುಲದೀಪ್ ಬಿಷ್ಣೋಯ್ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಭಜನ್ ಲಾಲ್ ಅವರ ಪುತ್ರ. ಅಲ್ಲದೆ ಇವರು ಮೂರು ಬಾರಿ ಶಾಸಕರಾಗಿದ್ದರು.
ಈ ಚುನಾವಣೆಯಲ್ಲಿ ಸೋತರೂ ಫೋಗಟ್ ಅವರ ಜನಪ್ರಿಯತೆ ಕಡಿಮೆಯಾಗಿರಲಿಲ್ಲ. ಮುಖ್ಯವಾಗಿ ಇಂಟರ್ನೆಟ್ನಲ್ಲಿ ಜನಪ್ರಿಯತೆ ಹೊಂದಿದ್ದ ಪೋಗಟ್, ಆದಂಪುರ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ಫಾಲೋವರ್ಗಳನ್ನು ಹೊಂದಿದ್ದರು. ಕುಲದೀಪ್ ಬಿಷ್ಣೋಯ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ವಾರವಷ್ಟೇ ಸೋನಾಲಿ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಮುಂಬರುವ ಆದಂಪುರ್ ಉಪಚುನಾವಣೆಯಲ್ಲಿ ಸೋನಾಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು.
ಸೋನಾಲಿ ಫೋಗಟ್ ಬಿಗ್ ಬಾಸ್ 14 ರ ಸ್ಪರ್ಧಿಯಾಗಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದರು ಮತ್ತು ಟಿಕ್‌ಟಾಕ್‌ನಲ್ಲಿ ಹೆಚ್ಚಿನ ಫಾಲೋವರ್ಗಳನ್ನು ಹೊಂದಿದ್ದರು.