ಜೈಪುರ( ರಾಜಸ್ಥಾನ): ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹಳಿ ತಪ್ಪಿದೆ. ಹಣಕಾಸು ಸ್ಥಿತಿಯನ್ನು ಹಾಳು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ಮನಮೋಹನ್ ಸಿಂಗ್ ಅವಧಿಯಲ್ಲಿ ದೇಶದ ಹಣಕಾಸು ಪರಿಸ್ಥಿತಿ ಸುವ್ಯವಸ್ಥಿತವಾಗಿತ್ತು. ಅದನ್ನ ಬಲ ಪಡಿಸಲು ಆಗಿನ ಯುಪಿಎ ಸರ್ಕಾರ ನಿರಂತರ ಕ್ರಮಗಳನ್ನು ಕೈಗೊಂಡಿತ್ತು ಎಂದು ರಾಹುಲ್ ಹೇಳಿದ್ದಾರೆ. ರಾಜಸ್ಥಾನದ ಬನ್ಸವಾರಾ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಎರಡು ಹಿಂದೂಸ್ತಾನಗಳನ್ನ ಸ್ಥಾಪನೆ ಮಾಡುತ್ತಿದ್ದಾರೆ ರಾಹುಲ್ ಹರಿಹಾಯ್ದಿದ್ದಾರೆ.
ಎರಡು ಹಿಂದೂಸ್ತಾನ ಎಂದು ಬಡವರ ಭಾರತ ಮತ್ತೊಂದು ಶ್ರೀಮಂತರ ಭಾರತವನ್ನು ಮೋದಿ ನಿರ್ಮಾಣ ಮಾಡುತ್ತಿದ್ದಾರೆ. ಅಂದರೆ ಒಂದು - ಎರಡ್ಮೂರು ಉದ್ಯಮಿಗಳಿರುವ ಭಾರತ, ಮತ್ತೊಂದು ದಲಿತರು, ರೈತರು ಹಾಗೂ ಬಡವರು ಮತ್ತು ನಿರ್ಗತಿಕರ ಭಾರತ ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಎರಡು ಹಿಂದುಸ್ತಾನ ಮಾಡಲು ಬಿಡಲ್ಲ: ಕಾಂಗ್ರೆಸ್ ನಾಯಕರು, ದೇಶದಲ್ಲಿ ಸೃಷ್ಟಿಯಾಗುತ್ತಿರುವ ನಿರುದ್ಯೋಗ ಮತ್ತು ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪುತ್ತಿರುವುದನ್ನು ದೇಶದ ಜನರ ಗಮನಕ್ಕೆ ತರುತ್ತಿದ್ದು, ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ. ಭಾರತದ ಅರ್ಥ ವ್ಯವಸ್ಥೆ ಮೇಲೆ ಮುಗಿಬಿದ್ದಿರುವ ಬಿಜೆಪಿ, ಜಿಎಸ್ಟಿಯನ್ನು ಒತ್ತಾಯ ಪೂರ್ವಕವಾಗಿ ಜನರ ಮೇಲೆ ಹೇರುತ್ತಿದೆ. ಇದು ದೇಶದ ಹಣಕಾಸು ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಎರಡು ಹಿಂದುಸ್ತಾನಗಳನ್ನ ನಿರ್ಮಾಣ ಮಾಡುತ್ತಿದೆ. ಆದರೆ ನಮಗೆ ಒಂದೇ ಹಿಂದುಸ್ತಾನ ಬೇಕು. ದೇಶದ ರಕ್ಷಣಗಾಗಿ ನಮ್ಮ ಹೋರಾಟ ನಿರಂತರ ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ರಾಜಸ್ಥಾನದಲ್ಲಿ ನಡೆದ ಮೂರು ದಿನಗಳ ಚಿಂತನಾ ಶಿಬಿರ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ನಡೆಸಲು ಉದ್ದೇಶೀಸಿದೆ.