ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದೆ. ಆದರೆ, ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಯಶಸ್ವಿಯಾಗಿದ್ದರೂ, ಕಳೆದ ಬಾರಿಗಿಂತ ಈ ಬಾರಿ ಅದರ ಸಾಧನೆ ಅಷ್ಟೊಂದು ಉತ್ತಮವಾಗಿಲ್ಲ ಎಂದೇ ವಿಶ್ಲೇಷಿಸಲಾಗಿದೆ.
ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಈ ಹಿಂದೆಯೇ ಬಿಜೆಪಿ ಅಧಿಕಾರದಲ್ಲಿ ಇತ್ತು. ಪಂಜಾಬ್ನಲ್ಲಿ ಅಧಿಕಾರ ಹಿಡಿಯಬೇಕೆಂಬ ಪ್ರಯತ್ನ ಫಲಿಸಿಲ್ಲ ಅಷ್ಟೇ. ಉತ್ತರ ಪ್ರದೇಶ ಸೇರಿ ಗೋವಾ, ಮಣಿಪುರ, ಉತ್ತರಾಖಂಡ್ನಲ್ಲಿ ತನ್ನ ಅಧಿಪತ್ಯಕ್ಕೆ ಗಟ್ಟಿ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗುದ್ದುಗೆ ಏರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
40 ಸದಸ್ಯ ಬಲದ ಗೋವಾದಲ್ಲಿ ಈ ಹಿಂದೆ 17 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ 20 ಸ್ಥಾನಗಳು ಪಡೆದಿದೆ. 60 ಸದಸ್ಯ ಬಲದ ಮಣಿಪುರದಲ್ಲಿ 21ರಿಂದ 32 ಸ್ಥಾನಗಳಿಗೆ ತನ್ನ ಪ್ರಬಲ್ಯ ಹೆಚ್ಚಿಸಿಕೊಂಡಿದೆ. 70 ಸದಸ್ಯ ಬಲದ ಉತ್ತರಾಖಂಡ್ನಲ್ಲೂ ಕಳೆದ ಬಾರಿ 57 ಪಡೆದಿದ್ದ ಬಿಜೆಪಿ ಈ ಬಾರಿ 47 ಸ್ಥಾನಗಳಲ್ಲಿ ವಿಜಯ ಸಾಧಿಸಿ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ, 117 ಸಂಖ್ಯಾಬಲದ ಪಂಜಾಬ್ನಲ್ಲಿ 3ರಿಂದ 2 ಸ್ಥಾನಕ್ಕೆ ಬಿಜೆಪಿ ಕುಸಿದು ಹಿನ್ನಡೆ ಅನುಭವಿಸಿದೆ.
403 ಸದಸ್ಯ ಬಲದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಪತ್ಯ ಸಾಧಿಸಿದೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ 312 ಸ್ಥಾನಗಳನ್ನು ಗೆದ್ದಿದ್ದ ಕೇಸರಿ ಪಡೆ ಈ ಬಾರಿ 255 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿಯೊಂದಿಗೆ ಒಟ್ಟಾರೆ 274 ಸ್ಥಾನಗಳಲ್ಲಿ ಗೆದ್ದಿದೆ. ಆದರೆ, ಯೋಗಿ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಕೇಶವಪ್ರಸಾದ್ ಮೌರ್ಯ ಸೇರಿ 11 ಜನ ಸಚಿವರು ಈ ಬಾರಿ ಸೋಲು ಕಂಡಿದ್ದಾರೆ ಎಂಬುದು ಗಮನಾರ್ಹ.
ಯಾವ ರಾಜ್ಯದಲ್ಲಿ? ಯಾರ ಸರ್ಕಾರ?. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ಪಂಜಾಬ್ನಲ್ಲಿ ಮಾತ್ರ ಆಡಳಿತ ಚುಕ್ಕಾಣಿ ಬದಲಾಗಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಪಂಜಾಬ್ಗೂ ತನ್ನ ಅಧಿಕಾರವನ್ನು ವಿಸ್ತರಿಸಿದೆ. ಈ ಮೂಲಕ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಹೆಗ್ಗಳಿಕೆಗೆ ಆಪ್ ಪಾತ್ರವಾಗಿದೆ.
ಕೇಂದ್ರದ ಆಡಳಿತಾರೂಢ ಬಿಜೆಪಿ, ಈ ಪಂಚರಾಜ್ಯಗಳ ಚುನಾವಣೆ ಬಳಿಕ ಒಟ್ಟಾರೆ 18 ರಾಜ್ಯಗಳಲ್ಲಿ ಅಧಿಕಾರದಲ್ಲಿ ಮುಂದುವರೆದಿದೆ. 8 ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತಿದ್ದರೆ, 10 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರಗಳಿವೆ. ದೇಶದ ಹಳೆ ಪಕ್ಷ ಕಾಂಗ್ರೆಸ್ ಎರಡು ರಾಜ್ಯಗಳಲ್ಲಿ ಸ್ವಂತ ಬಲದ ಸರ್ಕಾರ ಹೊಂದಿದೆ. ಇತರ ಎರಡು ಕಡೆಗಳಲ್ಲಿ ಕಾಂಗ್ರೆಸ್ ಪಾಲುದಾರ ಸರ್ಕಾರಗಳು ಅಧಿಕಾರದಲ್ಲಿವೆ.
ಬಿಜೆಪಿ ಅಧಿಕಾರದ ರಾಜ್ಯಗಳು
- ಅರುಣಾಚಲ ಪ್ರದೇಶ
- ಗೋವಾ
- ಗುಜರಾತ್
- ಹಿಮಾಚಲ ಪ್ರದೇಶ
- ಕರ್ನಾಟಕ
- ಮಧ್ಯಪ್ರದೇಶ
- ಉತ್ತರ ಪ್ರದೇಶ
- ಉತ್ತರಾಖಂಡ
- ಅಸ್ಸೋಂ (ಬಿಜೆಪಿ-ಎಜಿಪಿ-ಯುಪಿಎಲ್)
- ಬಿಹಾರ (ಬಿಜೆಪಿ-ಜೆಡಿಯು-ಎಚ್ಎಎಂ-ವಿಐಪಿ)
- ಹರಿಯಾಣ (ಬಿಜೆಪಿ-ಜೆಜೆಪಿ)
- ಮೇಘಾಲಯ (ಎನ್ಎನ್ಪಿ-ಯುಡಿಪಿ-ಪಿಡಿಎಫ್-ಬಿಜೆಪಿ
- ಮಿಜೋರಾಂ (ಎಂಎನ್ಎಫ್-ಬಿಜೆಪಿ)
- ಪುದುಚೇರಿ (ಎಐಎನ್ಆರ್ಸಿ-ಬಿಜೆಪಿ)
- ನಾಗಾಲ್ಯಾಂಡ್ (ಎನ್ಡಿಪಿಪಿ-ಬಿಜೆಪಿ)
- ಸಿಕ್ಕಿಂ (ಎಸ್ಕೆಎಂ-ಬಿಜೆಪಿ)
- ತ್ರಿಪುರ ಬಿಜೆಪಿ-ಐಪಿಎಫ್ಟಿ
- ಮಣಿಪುರ-ಬಿಜೆಪಿ-ಎನ್ಪಿಪಿ-ಎಲ್ಜೆಪಿ
ಕಾಂಗ್ರೆಸ್ ಅಧಿಕಾರದ ರಾಜ್ಯಗಳು
- ಛತ್ತೀಸ್‌ಗಢ
- ರಾಜಸ್ಥಾನ (ಆರ್ಎಲ್ಡಿ ಮೈತ್ರಿ)
ಪ್ರಾದೇಶಿಕ ಪಕ್ಷಗಳ ಸರ್ಕಾರಗಳು
- ಆಂಧ್ರಪ್ರದೇಶ- ವೈಎಸ್ಆರ್ ಕಾಂಗ್ರೆಸ್
- ಕೇರಳ -ಸಿಪಿಐಎಂ-ಸಿಪಿಐ
- ಒಡಿಶಾ-ಆರ್ಜೆಡಿ
- ತಮಿಳುನಾಡು -ಡಿಎಂಕೆ
- ತೆಲಂಗಾಣ-ಟಿಆರ್ಎಸ್
- ಪಶ್ಚಿಮ ಬಂಗಾಳ- ಟಿಎಂಸಿ
ಆಮ್ ಆದ್ಮಿ ಪಕ್ಷ
- ದೆಹಲಿ
- ಪಂಜಾಬ್
ಇತರ ಮೈತ್ರಿ ಸರ್ಕಾರಗಳು
- ಜಾರ್ಖಂಡ್ (ಜೆಎಂಎಂ-ಕಾಂಗ್ರೆಸ್-ಆರ್ಜೆಡಿ-ಎನ್ಸಿಪಿ)
- ಮಹಾರಾಷ್ಟ್ರ (ಶಿವಸೇನೆ-ಕಾಂಗ್ರೆಸ್-ಎನ್ಪಿಸಿ)