ನವದೆಹಲಿ/ಬೆಂಗಳೂರು: ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ದೇಶಾದ್ಯಂತ ಬಿಜೆಪಿ ಯುವ ಮೋರ್ಚಾ ಡಾಕ್ಟರ್ ಹೆಲ್ಪ್ ಲೈನ್ 080 6817 3286 ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಚಾಲನೆ ನೀಡಿದರು.
ಸಹಾಯವಾಣಿ 080 6817 3286 ಸಂಖ್ಯೆಗೆ ಕರೆ ಮಾಡಿ ತಮಗೆ ಬೇಕಾದ ಭಾಷೆಯನ್ನು ಆಯ್ದುಕೊಂಡ ನಂತರ ಕೆಲವೇ ನಿಮಿಷಗಳಲ್ಲಿ, ತಜ್ಞ ವೈದ್ಯರು, ಸೋಂಕಿತರ ಮೊಬೈಲ್ಗೆ ಕರೆ ಮಾಡಿ ಕೋವಿಡ್ ನ ಲಕ್ಷಣಗಳು, ಆಮ್ಲಜನಕದ ಸ್ಯಾಚುರೇಶನ್ ಪ್ರಮಾಣ ಮತ್ತು ಇತರ ಅಗತ್ಯ ವಿವರಗಳನ್ನು ಪಡೆದು ಸೂಕ್ತವಾದ ಸಲಹೆ ನೀಡಲಿದ್ದಾರೆ. ಹೋಂ ಐಸೋಲೇಷನ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು & ತೆಗೆದುಕೊಳ್ಳಬೇಕಾದ ಔಷಧೋಪಚಾರದ ಬಗ್ಗೆ ವಿವರವಾದ ಮಾಹಿತಿಯನ್ನು ಕೂಡ ನೀಡಲಿದ್ದಾರೆ. ಒಂದು ವೇಳೆ ಆಸ್ಪತ್ರೆಯ ವೈದ್ಯೋಪಚಾರದ ಅವಶ್ಯಕತೆ ಇದ್ದಲ್ಲಿ ಅದಕ್ಕೆ ಬೇಕಾದ ಮಾಹಿತಿ ಕೂಡ ತಮಗೆ ಲಭ್ಯವಿರಲಿದೆ. ಇದಲ್ಲದೇ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ವೈದ್ಯರು ಶಿಫಾರಸು ಮಾಡಿದ ಔಷಧಗಳನ್ನು ತಮ್ಮ ಮನೆ ಬಾಗಿಲಿಗೇ ನೇರವಾಗಿ ಬಂದು ತಲುಪಿಸಲಿದ್ದಾರೆ.
ಸಹಾಯವಾಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ದೇಶದ ಯಾವುದೇ ಮೂಲೆಯಿಂದ ನಾಗರಿಕರು ಕರೆ ಮಾಡಿದ ನಂತರ ಐ.ವಿ.ಆರ್ ಮೂಲಕ ತಮ್ಮ ಆದ್ಯತೆಗಳನ್ನು ನಮೂದಿಸಿದ ತಕ್ಷಣ, ವೈದ್ಯರೊಬ್ಬರಿಂದ ಕರೆ ಮಾಡಲಾಗುತ್ತದೆ. ನಂತರ ಕರೆ ಮಾಡಿದ ವ್ಯಕ್ತಿಯು ಆಯಾ ರಾಜ್ಯದ ನಿರ್ದಿಷ್ಟ ಯುವ ಮೋರ್ಚಾ ಘಟಕ/ ಕಾರ್ಯಕರ್ತರ ಮೂಲಕ ಔಷಧಿಗಳು, ಅಗತ್ಯ ದಿನಬಳಕೆ ವಸ್ತುಗಳ ಪೂರೈಕೆ, ಆಹಾರ ಹಾಗೂ ಇತರ ಸಹಾಯಗಳಿಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಬಿಜೆಪಿ ಹಾಗೂ ಅದರ ಯುವ ಘಟಕವು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ದೇಶಾದ್ಯಂತ ನಾಗರಿಕರ ಸಹಾಯಕ್ಕೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ. ಕೋವಿಡ್-19 ಲಸಿಕಾ ಅಭಿಯಾನ, ಸೋಂಕಿತರು ಹಾಗೂ ವೈದ್ಯರೊಂದಿಗೆ ಸಮನ್ವಯ ಸಾಧಿಸಿ, ಔಷಧಿ ಹಾಗೂ ಇತರ ದಿನನಿತ್ಯದ ಅಗತ್ಯ ವಸ್ತುಗಳನ್ನು ತಲುಪಿಸುವಿಕೆಯಂತಹ ಜನುಪಯೋಗಿ ಕಾರ್ಯ ಮಾಡುತ್ತಿರುವ ಪಕ್ಷದ ಕಾರ್ಯಕರ್ತರ ಕಾರ್ಯ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ದೇಶದ ನಾಗರಿಕರ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಒದಗಿಸುತ್ತಿರುವ ಬಿಜೆಪಿ ಕಾರ್ಯಕರ್ತರೆಲ್ಲರಿಗೂ ಕೃತಜ್ಞತೆ ತಿಳಿಸುತ್ತ, "ದೇಶಾದ್ಯಂತ ಇಂದು ಆಸ್ಪತ್ರೆ ಸೇರುತ್ತಿರುವ ಶೇ.95-98 ರಷ್ಟು ಸೋಂಕಿತರೆಲ್ಲ ಅಗತ್ಯ ಮಾಹಿತಿ, ಡಾಕ್ಟರ್ ರೊಂದಿಗಿನ ಸಮಾಲೋಚನೆ ಕೊರತೆಯಿಂದ ಆಸ್ಪತ್ರೆಗಳಿಗೆ ಸೇರುತ್ತಿದ್ದಾರೆ. ಹೋಮ್ ಕ್ವಾರಂಟೈನ್, ಕೋವಿಡ್-19 ಗುಣಲಕ್ಷಣಗಳು, ಆಸ್ಪತ್ರೆ ನೋಂದಣಿ ಕುರಿತಂತೆ ಹಲವು ಸೇವೆಗಳನ್ನು ಸಹಾಯವಾಣಿ ಮೂಲಕ ವೈದ್ಯರೊಂದಿಗಿನ ಸಮಾಲೋಚನೆ/ ನೆರವಿನಿಂದ ಪಡೆಯಬಹುದು" ಎಂದು ವಿವರಿಸಿದರು.