ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಮಮತಾ ಬ್ಯಾನರ್ಜಿ ಅವರ ವೈದ್ಯಕೀಯ ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಪಶ್ಚಿಮ ಬಂಗಾಳದ ನಿಯೋಗವು ಕೋಲ್ಕತ್ತಾದ ಮುಖ್ಯ ಚುನಾವಣಾ ಅಧಿಕಾರಿ ಅನ್ನು ಭೇಟಿ ಮಾಡಿದೆ.
ಮಮತಾ ಬ್ಯಾನರ್ಜಿ ಮೊದಲು ತಮ್ಮ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು, ಆದರೆ ಬಳಿಕ ಅಪಘಾತ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಚಾರ ಕೂಡ ನಡೆಸಿದ್ದಾರೆ. ಈ ಎಲ್ಲಾ ಘಟನೆಯ ಹಿಂದೆ ವೈದ್ಯರ ಪ್ರಭಾವವಿದೆ ಎಂಬ ಅನುಮಾನವಿದೆ. ಹಾಗಾಗಿ ಬ್ಯಾನರ್ಜಿ ಅವರ ವೈದ್ಯಕೀಯ ವರದಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಿಯೋಗ ಚುನಾವಣಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ ಎಂದು ಸಂಸದ ಅರ್ಜುನ್ ಸಿಂಗ್ ತಿಳಿಸಿದ್ದಾರೆ.
ಈ ಹಿಂದೆ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಕೆಲ ನಾಯಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ತನಿಖೆ ನಡೆಸಿದ ಆಯೋಗ, ಮಮತಾ ಬ್ಯಾನರ್ಜಿ ಅವರ ಮೇಲೆ ನಂದಿಗ್ರಾಮದಲ್ಲಿ ಪೂರ್ವಯೋಜಿತ ಹಲ್ಲೆ ನಡೆದಿಲ್ಲ. ಮಮತಾ ಅವರು ಗಾಯಗೊಳ್ಳಲು ಕಾರಣ ಅವರ ಭದ್ರತೆಯಲ್ಲಿನ ಲೋಪ ಎಂದು ಚುನಾವಣಾ ವೀಕ್ಷಕರು ವರದಿ ನೀಡಿದ್ದರು.
ಓದಿ: 'ಮಹಾ' ಕೊರೊನಾ ಅಟ್ಟಹಾಸ: ನಾಗ್ಪುರದಲ್ಲಿ ಲಾಕ್ಡೌನ್, ರಸ್ತೆಗಳು ಖಾಲಿ ಖಾಲಿ...
ನಂದಿಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ನಡೆದ ತಳ್ಳಾಟದಲ್ಲಿ ದೀದಿ ಗಾಯಗೊಂಡಿದ್ದರು. ಕೋಲ್ಕತ್ತಾ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮಮತಾ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
294 ಸದಸ್ಯ ಬಲ ಇರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಿಂದ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.