ನವದೆಹಲಿ : ಕರ್ನಾಟಕದ ಹೆಚ್ಚಿನ ಭಾಗಗಳು ಮಳೆ ಕೊರತೆಯಿಂದಾಗಿ ಬರಗಾಲಕ್ಕೆ ತುತ್ತಾಗಿವೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 'ಇಂಡಿಯಾ' ಮೈತ್ರಿಕೂಟದ ಮಿತ್ರಪಕ್ಷವಾದ ಡಿಎಂಕೆ ಒತ್ತಡಕ್ಕೆ ಮಣಿದು ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿದೆ ಎಂದು ಬಿಜೆಪಿ ಟೀಕಿಸಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕಾಂಗ್ರೆಸ್ ತನ್ನ ಮಿತ್ರಪಕ್ಷ ಡಿಎಂಕೆ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ. ರಾಜ್ಯವೇ ಬರಗಾಲದಲ್ಲಿದ್ದಾಗ ಇಲ್ಲಿನ ಜನರನ್ನು ಲೆಕ್ಕಿಸದೇ ಆ ರಾಜ್ಯಕ್ಕೆ ನೀರು ಹರಿಸಿದೆ ಎಂದು ಆರೋಪಿಸಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕವೇ ಬರಗಾಲದಲ್ಲಿದ್ದಾಗ, ಕಾಂಗ್ರೆಸ್ ಸರ್ಕಾರ ಇತರ ಪಕ್ಷಗಳೊಂದಿಗೆ ಸಮಾಲೋಚಿಸದೆ ನೀರು ಬಿಡಲು ನಿರ್ಧರಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಲಿದೆ. ರಾಜ್ಯದಲ್ಲಿ 50 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕೃಷಿಗೆ ಹೊಡೆತ ಬಿದ್ದಿದೆ. ಆದರೂ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ, ಅಭಿವೃದ್ಧಿಹೀನ ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದ ಸಚಿವರು, ಇಲ್ಲಿನ ಜನರನ್ನು ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರಾಜಕಾರಣ ಮಾಡುವುದರಲ್ಲಿಯೇ ನಿರತವಾಗಿದ್ದು, ಮಿತ್ರಪಕ್ಷಕ್ಕಾಗಿ ರಾಜ್ಯದ ರೈತರಿಗೆ ಬರೆ ಎಳೆದಿದೆ ಎಂದು ದೂರಿದರು.
ಹೊಸ ಪೀಠಕ್ಕೆ ಸುಪ್ರೀಂ ಒಪ್ಪಿಗೆ: ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ತಮಿಳುನಾಡು, ತುರ್ತು ವಿಚಾರಣೆ ನಡೆಸಲು ಕೋರಿದೆ. ವಾದ ಆಲಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಇಂದೇ ಹೊಸ ವಿಚಾರಣಾ ಪೀಠ ರಚಿಸುವುದಾಗಿ ಹೇಳಿದ್ದಾರೆ. ಇತ್ತ ಕರ್ನಾಟಕವೂ ಕೂಡ ಇಂದೇ ತಮಿಳುನಾಡು ವಿರುದ್ಧ ಅರ್ಜಿ ಸಲ್ಲಿಸಲಿದೆ.
'ಬೂಟಾಟಿಕೆಯ ರಾಹುಲ್ ಗಾಂಧಿ': ಲಡಾಖ್‌ನಲ್ಲಿ ಚೀನಾ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಚಂದ್ರಶೇಖರ್, ಅವರೊಬ್ಬರು ಬೂಟಾಟಿಕೆಯ ಐಕಾನ್ ಆಗಿದ್ದಾರೆ. ದೇಶದ ಇತಿಹಾಸದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯ ವಿಷಯದಲ್ಲಿ ದಿಟ್ಟ, ಕಠಿಣ ನಿರ್ಧಾರ ಕೈಗೊಂಡ ಸರ್ಕಾರವಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಾಗಿದೆ ಎಂದು ಕೇಂದ್ರ ಸಚಿವ ಚಂದ್ರಶೇಖರ್ ಹೇಳಿದರು.
ಯುಪಿಎ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮತ್ತು ಚೀನಾ ನಡುವೆ ನಡೆದ ಒಪ್ಪಂದವನ್ನು ಉಲ್ಲೇಖಿಸಿ ಟೀಕಿಸಿದ ಕೇಂದ್ರ ಸಚಿವರು, ದೇಶದ ಭೂಭಾಗವನ್ನು ಬಿಟ್ಟುಕೊಡಲಾಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಭಾರತದ ವಿರೋಧಿ ಶಕ್ತಿಗಳನ್ನು ಸಂತುಷ್ಟಪಡಿಸಿದ್ದಾರೆ ಎಂದು ಕಿಚಾಯಿಸಿದರು.
ಇದನ್ನೂ ಓದಿ: ಕಾವೇರಿ ನದಿ ನೀರು ಹಂಚಿಕೆ ವಿವಾದ: ಹೊಸ ಪೀಠ ರಚನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ, ಕರ್ನಾಟಕದಿಂದ ಇಂದೇ ಮೇಲ್ಮನವಿ ಸಲ್ಲಿಕೆ