ಜಾಮ್‌ನಗರ(ಗುಜರಾತ್): ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಿವಾಬಾ ಜಡೇಜಾ ಆರಂಭದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಎದುರು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ಬಳಿಕ ಪ್ರತಿ ಸುತ್ತಿನಲ್ಲೂ ಮುನ್ನಡೆ ಪಡೆದುಕೊಂಡರು. ಅಂತಿಮವಾಗಿ ರಿವಾಬಾ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕರಷಣಬಾಯಿ ಕರಮುರ್ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.
'ನನ್ನನ್ನು ಅಭ್ಯರ್ಥಿಯಾಗಿ ಸ್ವೀಕರಿಸಿದವರು, ಜನರನ್ನು ತಲುಪುವಲ್ಲಿ ಸಹಕರಿಸಿದವರು ಹಾಗೂ ನನ್ನ ಗೆಲುವಿಗಾಗಿ ಕೆಲಸ ಮಾಡಿದವರಿಗೆಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಇದು ನನ್ನೊಬ್ಬಳ ಗೆಲುವಲ್ಲ, ನಮ್ಮೆಲ್ಲರ ಗೆಲುವು' ಎಂದು ರಿವಾಬಾ ಜಡೇಜಾ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.
ಜಡೇಜಾ ಅವರ ಪತ್ನಿ ರಾವಾಬಾ 2019ರಲ್ಲಿ ಬಿಜೆಪಿ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ರಿವಾಬಾ ಜಡೇಜಾರನ್ನು ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಚುನಾವಣೆಗೂ ಮುನ್ನ ದಂಪತಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ರಿವಾಬಾ ಕಾಂಗ್ರೆಸ್ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿದ್ದು, ಜಡೇಜಾ ಕುಟುಂಬವೂ ಕೂಡ ಹೆಚ್ಚಾಗಿ ಕಾಂಗ್ರೆಸ್ನ್ನು ಬೆಂಬಲಿಸುತ್ತಿತ್ತು. ಕ್ರಿಕೆಟಿಗ ರವೀಂದ್ರ ಜಡೇಜಾ ಅವರೊಂದಿಗೆ ವಿವಾಹವಾದ ಮೂರು ವರ್ಷದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ರಿವಾಬಾ ಮೊದಲ ಬಾರಿಗೆ ಸ್ಪರ್ಧಿಸಿದ ಚುನಾವಣಾ ಕಣದಲ್ಲೇ ಗೆಲುವು ಸಾಧಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ: 158 ಸ್ಥಾನಗಳಲ್ಲಿ ಮುನ್ನಡೆ..149 ಸ್ಥಾನ ಗೆಲುವಿನ ಸಾರ್ವಕಾಲಿಕ ದಾಖಲೆ ಮುರಿಯುತ್ತಾ ಬಿಜೆಪಿ?