ದುರ್ಗಾಪುರ (ಪಶ್ಚಿಮ ಬಂಗಾಳ) : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಟಿಎಂಸಿ-ಬಿಜೆಪಿ ನಡುವಿನ ಸಮರ ಮುಂದುವರಿದಿದೆ.
ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಅಕ್ರಮ ಭೂಸ್ವಾಧೀನ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆಂಬಲಿಗರು ಮತ್ತು ಟಿಎಂಸಿ ನಡುವೆ ಘರ್ಷಣೆ ನಡೆದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದುರ್ಗಾಪುರದ ರುಯಿದಾಸ್ ಪ್ಯಾರಾ ಮೈದಾನದಲ್ಲಿ ಕೋತಿ ಮೃತಪಟ್ಟಿತ್ತು.
ಬಳಿಕ ಅಲ್ಲಿಯೇ ಮಂಗನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಮಧ್ಯೆ, ಬಿಜೆಪಿ ಬೆಂಬಲಿಗರು ಅಲ್ಲಿಯೇ ಹನುಮಾನ್ ದೇಗುಲ ನಿರ್ಮಿಸಲು ಮುಂದಾದರು. ಈ ವೇಳೆ ಟಿಎಂಸಿಯು ಬಿಜೆಪಿ ಅಕ್ರಮವಾಗಿ ಇಡೀ ಕ್ಷೇತ್ರ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿದ್ದು, ಉಭಯ ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿಯಾಗಿದೆ.
ಹಿಂಸಾಚಾರದಲ್ಲಿ ಟಿಎಂಸಿಯು ತಮ್ಮ ಕಾರ್ಯಕರ್ತನ ಶಿರಚ್ಛೇದ ಮಾಡಿರುವುದಾಗಿ ಬಿಜೆಪಿ ಆರೋಪಿಸಿದೆ. ಭಾರತೀಯ ಜನತಾ ಪಕ್ಷದ ಆರೋಪವನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ. ಈ ಸಂಬಂಧ ದುರ್ಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.