ಇಂದೋರ್: ಕೊರೊನಾ ಕರ್ಫ್ಯೂ ಹಾಗೂ ಲಾಕ್ಡೌನ್ ನಿಯಮ ಉಲ್ಲಂಘಕರಿಗೆ ಬಸ್ಕಿ, ಕಪ್ಪೆ ಓಟ ಮತ್ತು ಕಪಾಳಮೋಕ್ಷದಂತಹ ಶಿಕ್ಷೆ ನೀಡಿದ್ದು ಗೊತ್ತೇ ಇದೆ. ಆದ್ರೆ ಇಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಎಂದು ಪೊಲೀಸರು ನಾಯಿಯನ್ನು ಬಂಧಿಸಿದ ವಿಚಿತ್ರ ಘಟನೆ ನಡೆದಿದೆ.
ಇಂದೋರ್ನ ಪಾಲಾಸಿಯಾ ಏರಿಯಾದಲ್ಲಿ ಈ ಘಟನೆ ನಡೆದಿದೆ. ನಾಯಿಯ ಜೊತೆ ಅದರ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರದಿಂದ ಸಂಪೂರ್ಣ ಲಾಕ್ಡೌನ್ ಘೋಷಿಸಿದ ಇಂದೋರ್ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅಂತೆಯೇ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಓರ್ವ ವ್ಯಕ್ತಿ ತಮ್ಮ ನಾಯಿಯ ಜೊತೆ ರಸ್ತೆಯಲ್ಲಿ ಅಡ್ಡಾಡುತ್ತಿರುವುದನ್ನು ಪೊಲೀಸರು ನೋಡಿ ಬಂಧಿಸಿದ್ದಾರೆ.
ಮಾಲೀಕನ ಜೊತೆ ಶ್ವಾನ ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಮಾಲೀಕನ ವಿನಂತಿ ಮೇರೆಗೆ ಇಬ್ಬರನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ. ರಸ್ತೆಯಲ್ಲಿ ಪ್ರಾಣಿಗಳನ್ನು ಅಡ್ಡಾಡಿಸಬೇಡಿ ಎಂದು ಮಾಲೀಕನಿಗೆ ಪೊಲೀಸರು ಎಚ್ಚರಿಕೆ ನೀಡಿ, ಕಳುಹಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರಿ ಸದ್ದು ಮಾಡುತ್ತಿದ್ದು, ನೋಡಿದವರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.