ಡೆಹ್ರಾಡೂನ್: ಉತ್ತರ ಭಾರತದಲ್ಲಿ ಭಾರಿ ಆತಂಕ ಮೂಡಿಸಿರುವ ಹಕ್ಕಿ ಜ್ವರ ತಡೆಗೆ ಸಂಬಂಧ ಪಟ್ಟ ಇಲಾಖೆಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಉತ್ತರಾಖಂಡ್ ಸರ್ಕಾರವೂ ಹಕ್ಕಿ ಜ್ವರ ತಡೆಗೆ ಮುಂದಾಗಿದ್ದು, ಅಲ್ಲಿನ ಸರ್ಕಾರ ತುರ್ತು ಸ್ಪಂದನಾ ತಂಡಗಳನ್ನು ರಚಿಸಿ 40 ಅರಣ್ಯ ವಿಭಾಗಗಳಿಗೆ ನಿಯೋಜಿಸಲಾಗಿದೆ ಎಂದು ಮುಖ್ಯ ವನ್ಯಜೀವಿ ಅಧಿಕಾರಿ ಜೆಎಸ್ ಸುಹಾಗ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಮಾಹಿತಿ ನೀಡಿದ ಅಧಿಕಾರಿ, ಪರಿಸ್ಥಿತಿಯ ಬಗ್ಗೆ ನಿಗಾವಹಿಸುವಂತೆ ಎಲ್ಲ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ)ಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕೆಲವೆಡೆ ಹಕ್ಕಿ ಜ್ವರದಿಂದ ಪಕ್ಷಿಗಳು ಮೃತಪಟ್ಟಿರವುದು ರಾಜ್ಯದಲ್ಲಿ ವರದಿಯಾಗಿದೆ. ಏವಿಯನ್ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ 40 ವಿಭಾಗಗಳಲ್ಲಿ ತುರ್ತು ಸ್ಪಂದನಾ ತಂಡಗಳನ್ನು ನಿಯೋಜಿಸಲಾಗಿದೆ. ಈ ತಂಡಗಳು ಸೋಂಕು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ಸುಹಾಗ್ ವಿವರಿಸಿದ್ದಾರೆ.
ಈವರೆಗೆ ವಲಸೆ ಹಕ್ಕಿಗಳಿಂದ ಏವಿಯನ್ ಜ್ವರ ಕಾಣಿಸಿಕೊಳ್ಳುತ್ತಿತ್ತು. ಇವು ಮಲವಿಸರ್ಜನೆ, ಹಂಚಿಕೊಂಡು ಆಹಾರ ತಿನ್ನುವುದು, ಒಟ್ಟಾಗಿ ನೀರು ಕುಡಿಯುವ ಮೂಲಕ ಸೋಂಕನ್ನು ಹರಡಿಸುತ್ತವೆ. ಅರಣ್ಯಾಧಿಕಾರಿಗಳು ಇವುಗಳ ಮೇಲೆ ನಿಗಾ ವಹಿಸಬೇಕು ಎಂದಿದ್ದಾರೆ.
ಇದೇ ಜನವರಿ 12 ರಂದು ಕಟದ್ವಾರ್ ಮತ್ತು ಡೆಹ್ರಾಡೂನ್‌ನಲ್ಲಿ ಹಕ್ಕಿಗಳಿಗೆ ಹಕ್ಕಿ ಜ್ವರ ಇರುವುದು ಮಾದರಿ ಪರೀಕ್ಷೆಯಿಂದ ಖಾತ್ರಿಯಾಗಿತ್ತು. ದೇಶದ 9 ರಾಜ್ಯಗಳ ಸಾಕಾಣಿಕೆ ಕೇಂದ್ರಗಳಲ್ಲಿ ಹಕ್ಕಿಗಳಿಗೆ ಸೋಂಕು ಇರುವುದನ್ನು ಪತ್ತೆ ಹಚ್ಚಲಾಗಿತ್ತು. 12 ರಾಜ್ಯಗಳಲ್ಲಿ ಕಾಗೆಗಳು, ವನ್ಯ ಪಕ್ಷಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರದ ಪಶು ಸಂಗೋಪನೆ ಸಚಿವಾಲಯ ನಿನ್ನೆಯಷ್ಟೇ ಮಾಹಿತಿ ನೀಡಿತ್ತು.