ಮುಜಫ್ಫರ್ಪುರ (ಬಿಹಾರ): ರಾಜ್ಯದ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರು ತಮ್ಮ 2 ವರ್ಷ 9 ತಿಂಗಳ ಅವಧಿಯ ಸಂಪೂರ್ಣ ಸಂಬಳವನ್ನು ಕಾಲೇಜಿಗೆ ಹಿಂತಿರುಗಿಸಿ ಮಹಾತ್ಮ ಗಾಂಧಿಯವರ ಶೈಲಿಯಲ್ಲಿ ತಮ್ಮ ಪ್ರತಿಭಟನೆಯನ್ನು ತೋರ್ಪಡಿಸಿದ್ದಾರೆ. ಮುಜಫ್ಫರ್ಪುರದ ನಿತೀಶ್ವರ್ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಲಲ್ಲನ್ ಕುಮಾರ್ ಎಂಬುವರೇ ಹೀಗೆ ಗಾಂಧಿಗಿರಿಯ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ ವ್ಯಕ್ತಿಯಾಗಿದ್ದಾರೆ.
ಇವರು ತಮ್ಮ 2 ವರ್ಷ 9 ತಿಂಗಳ ಸಂಬಳವಾದ 23 ಲಕ್ಷ ರೂಪಾಯಿಗಳನ್ನು ವಿಶ್ವವಿದ್ಯಾಯಕ್ಕೆ ಮರಳಿಸಿ ಅಚ್ಚರಿ ಮೂಡಿಸಿದ್ದಾರೆ. 2 ವರ್ಷ 9 ತಿಂಗಳ ಅವಧಿಯಲ್ಲಿ ತಾವು ಒಬ್ಬೇ ಒಬ್ಬ ವಿದ್ಯಾರ್ಥಿಗೆ ಒಂದೇ ಒಂದು ಅಕ್ಷರವನ್ನೂ ಕಲಿಸಿಲ್ಲ, ಅದಕ್ಕಾಗಿ ಅಷ್ಟೂ ಸಂಬಳವನ್ನು ವಾಪಸ್ ಮಾಡುತ್ತಿರುವುದಾಗಿ ಅವರು ಕಾರಣ ನೀಡಿದ್ದಾರೆ. ಸದ್ಯ ಅವರ ಮರಳಿಸಿದ ಸಂಬಳವನ್ನು ಜಮೆ ಮಾಡಿಕೊಳ್ಳುವುದಾ? ಅವರ ಲಾಜಿಕ್ ಸರಿಯಾಗಿದೆಯಾ? ಹೀಗೆ ಸರ್ಕಾರ ಗೊಂದಲದಲ್ಲಿ ಮುಳುಗಿದೆ. ವಿಶ್ವವಿದ್ಯಾಲಯವು ತಮ್ಮನ್ನು ಬೇರೊಂದು ಕಾಲೇಜಿಗೆ ವರ್ಗಾವಣೆ ಮಾಡದಿದ್ದರೆ ತಮಗೆ "ಶೈಕ್ಷಣಿಕ ಸಾವು" ಬರಲಿದೆ ಎಂದು ಡಾ.ಲಲ್ಲನ್ ಕುಮಾರ್ ಹೇಳಿದ್ದಾರೆ.
"ನಾನು ಕೆಲಸಕ್ಕೆ ಸೇರಿದಾಗ, ಸ್ನಾತಕೋತ್ತರ ತರಗತಿಗಳಿಗೆ ಕಲಿಸುವ ಅವಕಾಶವಿರುವ ಕಾಲೇಜಿಗೆ ನನ್ನನ್ನು ಪೋಸ್ಟ್ ಮಾಡಲಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಕಡಿಮೆ ಶ್ರೇಣಿಯನ್ನು ಹೊಂದಿರುವವರು ಆ ಪೋಸ್ಟಿಂಗ್‌ಗಳನ್ನು ಪಡೆದರು. ಈ ಕಾಲೇಜಿನ ತರಗತಿಗಳಿಗೆ ವಿದ್ಯಾರ್ಥಿಗಳು ಬರುವುದೇ ಇಲ್ಲ. ವರ್ಗಾವಣೆ ಪಟ್ಟಿಯಿಂದ ನನ್ನ ಹೆಸರನ್ನು ಪದೇ ಪದೇ ಕಡಿತಗೊಳಿಸಲಾಗಿದೆ." ಎಂದು ಕುಮಾರ್ ಹೇಳಿದ್ದಾರೆ.
ಲಲನ್ ಕುಮಾರ್ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲ ಮನೋಜ್ ಕುಮಾರ್, ಶೂನ್ಯ ಹಾಜರಾತಿ ಆರೋಪ ನಿರಾಧಾರ. ಎರಡು ವರ್ಷಗಳಿಂದ ಕೊರೊನಾವೈರಸ್ ಸಾಂಕ್ರಾಮಿಕದ ಕಾರಣದಿಂದ ತರಗತಿಗಳು ಸರಿಯಾಗಿ ನಡೆದಿಲ್ಲ. ಅವರಿಗೆ ವರ್ಗಾವಣೆ ಬೇಕಿದ್ದರೆ ನೇರವಾಗಿ ನನಗೆ ಕೇಳಬೇಕಿತ್ತು ಎಂದಿದ್ದಾರೆ.
"ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುತ್ತಿಲ್ಲ ಎಂಬ ವಿಷಯವನ್ನು ನಾವು ತನಿಖೆ ಮಾಡುತ್ತಿದ್ದೇವೆ." ಎಂದು ಬಾಬಾಸಾಹೇಬ ಭೀಮರಾವ್ ಅಂಬೇಡ್ಕರ್ ಬಿಹಾರ್ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್.ಕೆ.ಠಾಕೂರ್ ಹೇಳಿದ್ದಾರೆ.
ಪಿಎಚ್‌ಡಿ ಮಾಡಿರುವ ಲಲ್ಲನ್ ಕುಮಾರ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ''ನಿತೀಶ್ವರ್ ಕಾಲೇಜಿನಲ್ಲಿ ನಾನು ಸಲ್ಲಿಸಿದ ಸೇವೆಯು ನನಗೆ ತೃಪ್ತಿ ತಂದಿಲ್ಲ. ಆದ್ದರಿಂದ ನಾನು ನೇಮಕಾತಿ ದಿನಾಂಕದಿಂದ ಇಲ್ಲಿಯವರೆಗಿನ ಸಂಪೂರ್ಣ ಸಂಬಳವನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನೀಡಿದ ಜ್ಞಾನ ಮತ್ತು ಆತ್ಮಸಾಕ್ಷಿಯ ಧ್ವನಿಯ ಪ್ರಕಾರ ಹಿಂತಿರುಗಿಸುತ್ತಿದ್ದೇನೆ. ನಾನು ಇಲ್ಲಿ ನೇಮಕವಾದಾಗಿನಿಂದ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನೋಡಲಿಲ್ಲ." ಎಂದು ಲಲ್ಲನ್ ಕುಮಾರ್ ಹೇಳಿದ್ದಾರೆ.