ಪಾಟ್ನಾ(ಬಿಹಾರ): ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಹೊರಬಂದಿರುವ ನಿತೀಶ್ ಕುಮಾರ್ ಇದೀಗ ಜೆಡಿಯು, ಕಾಂಗ್ರೆಸ್ ಹಾಗೂ ಇತರೆ ಎಡಪಕ್ಷಗಳೊಂದಿಗೆ ಸೇರಿಕೊಂಡು ಮಹಾಘಟಬಂಧನ್ ರಚಿಸಿದ್ದಾರೆ. ಹೊಸ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ನಾಳೆ ಅವರು ಪ್ರಮಾಣ ವಚನ ಸ್ವೀಕರಿಸುವರು. ಉಪ ಮುಖ್ಯಮಂತ್ರಿಯಾಗಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಕೂಡಾ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.
ಇಂದು ಬೆಳಗ್ಗೆ ಜೆಡಿಯು ಸಂಸದರು, ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದ್ದ ನಿತೀಶ್ ಕುಮಾರ್, ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇದಾದ ಬಳಿಕ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಜೊತೆ ಮಹತ್ವದ ಮಾತುಕತೆ ನಡೆಸಿ ಲಾಲು ಪತ್ನಿ ರಾಬ್ರಿ ದೇವಿ ಅವರನ್ನು ಭೇಟಿ ಮಾಡಿ, ಮಹಾಘಟಬಂಧನ್ ಘೋಷಿಸಿದರು. ಹೊಸ ಮೈತ್ರಿ ಸರ್ಕಾರದಲ್ಲಿ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಸೇರಿದಂತೆ ಒಟ್ಟು 7 ಪಕ್ಷಗಳು ಸೇರಿಕೊಂಡಿವೆ. ನಾಳೆ ಮಧ್ಯಾಹ್ನ 2 ಗಂಟೆಗೆ ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಲಾಲು ಇಲ್ಲದೇ ಬಿಹಾರ ಚಾಲೂ ಆಗಲ್ಲ-ಲಾಲು ಪುತ್ರಿ: ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್ಜೆಡಿ ಜೊತೆ ನಿತೀಶ್ ಕುಮಾರ್ ಕೈ ಜೋಡಿಸುತ್ತಿದ್ದಂತೆ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಟ್ವೀಟ್ ಮಾಡಿದ್ದು, ಲಾಲೂ ಇಲ್ಲದೇ ಬಿಹಾರ ಚಾಲೂ ಆಗುವುದಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ: ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಹಿರಿಯ ಸಂಸದ ರವಿಶಂಕರ್ ಪ್ರಸಾದ್ ವಾಗ್ದಾಳಿ ನಡೆಸಿ, ಬಿಹಾರದಲ್ಲಿ ಜೆಡಿಯು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಮಾಡ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಬಿಜೆಪಿ ಆ ರೀತಿಯ ನಿರ್ಧಾರ ಕೈಗೊಳ್ಳುವುದಾಗಿದ್ದರೆ, ಅವರಿಗೆ ಕೇಂದ್ರದಲ್ಲಿ ಸಚಿವಗಿರಿ ಹಾಗೂ ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆ ನೀಡುತ್ತಿರಲಿಲ್ಲ ಎಂದರು. 2015ರಲ್ಲಿ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡಾಗ ಏನಾಗಿತ್ತು ಎಂಬುದರ ಬಗ್ಗೆ ವಿಚಾರ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ