ಪಾಟ್ನಾ(ಬಿಹಾರ): ತಮ್ಮ ಸಹೋದ್ಯೋಗಿಗಳ ಕೆಲಸ ತೃಪ್ತಿದಾಯಕವಾಗಿಲ್ಲ ಎಂದು ಕೋಪಗೊಂಡ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು(ಎಸ್‌ಪಿ) ತಮ್ಮ ಐವರು ಕಿರಿಯ ಪೊಲೀಸ್ ಅಧಿಕಾರಿಗಳನ್ನು ಲಾಕಪ್‌ನಲ್ಲಿಟ್ಟ ಘಟನೆ ಬಿಹಾರದ ನೆವಡಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಘಟನೆಯನ್ನು ಆರೋಪ ಹೊತ್ತ ಅಧಿಕಾರಿ ಅಲ್ಲಗಳೆದಿದ್ದಾರೆ. ಆದ್ರೆ ಇಬ್ಬರು ಸಬ್ ಇನ್ಸ್‌ಪೆಕ್ಟರ್ಸ್ ಹಾಗು ಮೂವರು ಎಎಸ್‌ಐಗಳೂ ಸೇರಿದಂತೆ ಐವರು ಲಾಕಪ್‌ನಲ್ಲಿ ಬಂಧಿಯಾಗಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಘಟನೆಯನ್ನು ಖಂಡಿಸಿರುವ ಬಿಹಾರ ಪೊಲೀಸ್ ಅಸೋಸಿಯೋಷನ್ (ಇದು ಪೊಲೀಸ್ ಸಿಬ್ಬಂದಿಯ ಯೂನಿಯನ್ ಆಗಿದ್ದು ಜಿಲ್ಲಾ ಶಾಖೆಗಳನ್ನೂ ಹೊಂದಿದೆ) ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿ ಗೌರವ್ ಮಂಗ್ಲಾ ವಿರುದ್ಧ ತನಿಖೆಗೆ ಆಗ್ರಹಿಸಿದೆ. ಈ ಪ್ರಕರಣ ಸೆಪ್ಟೆಂಬರ್ 8ರಂದು ನಡೆದಿದೆ ಎಂದು ತಿಳಿದುಬಂದಿದೆ.
ಭದ್ರತಾ ಸಿಸಿಟಿವಿ ಕ್ಯಾಮರಾದಲ್ಲಿ, ಸಬ್ ಇನ್ಸ್‌ಪೆಕ್ಟರ್‌ಗಳಾದ ಶತ್ರುಘ್ನ ಪಾಸ್ವಾನ್, ರಾಮ್‌ರೇಖಾ ಸಿಂಗ್, ಎಎಸ್‌ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಒರಾನ್ ನೆವಾಡಾ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಇರುವುದು ಕಂಡುಬರುತ್ತದೆ. ಇವರನ್ನು ಎಸ್‌ಪಿ, ಮಧ್ಯರಾತ್ರಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಲಾಕಪ್‌ನಲ್ಲಿ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.
ತಮ್ಮ ಮೇಲೆ ಬಂದಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಸ್‌ಪಿ ಗೌರವ್ ಮಂಗ್ಲಾ, ಅಂಥ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ. ಇದಕ್ಕೆ ಠಾಣೆಯ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಕೂಡಾ ದನಿಗೂಡಿಸಿದ್ದಾರೆ.
ಆದರೆ ವಿಶ್ವಸನೀಯ ಮೂಲಗಳು ನೀಡಿರುವ ಮಾಹಿತಿಯಂತೆ, ಸೆಪ್ಟೆಂಬರ್ 8ರ ರಾತ್ರಿ ಸುಮಾರು 9 ಗಂಟೆಗೆ ಎಸ್‌ಪಿ ಮಂಗ್ಲಾ ವಿವಿಧ ಪ್ರಕರಣಗಳ ತನಿಖೆಯ ಬೆಳವಣಿಗೆಯನ್ನು ಪರಿಶೀಲಿಸಲು ನೆವಾಡಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಕೆಲಸದಲ್ಲಿ ಬೇಜವಾಬ್ದಾರಿತನ ತೋರಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಸಿಟ್ಟಾದ ಅಧಿಕಾರಿ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಪೊಲೀಸರನ್ನು ಲಾಕಪ್‌ನಲ್ಲಿಡುವಂತೆ ಆದೇಶಿಸಿದ್ದಾರೆ. ಆದ್ರೆ ಪ್ರಕರಣದಲ್ಲಿ ಕೆಳ ಹಂತದ ಅಧಿಕಾರಿಗಳು ಎಸಗಿದ ಬೇಜವಾಬ್ದಾರಿತನ ಏನು ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಎಸ್ ಕೂಡಾ ಏನೂ ಮಾತನಾಡಿಲ್ಲ.
ಇದನ್ನೂ ಓದಿ: ಕೌಟುಂಬಿಕ ಕಲಹ ಬಗೆಹರಿಸಲು ₹40 ಸಾವಿರ ಲಂಚ ಕೇಳಿದ ಪೊಲೀಸ್: ಹಣ ನೀಡಲಾಗದೆ ಯುವಕ ಆತ್ಮಹತ್ಯೆ