ಪಶ್ಚಿಮ ಚಂಪಾರಣ್(ಬಿಹಾರ): ಜೇನುನೊಣಗಳ ಕಡಿತದಿಂದ ವ್ಯಕ್ತಿಯೊಬ್ಬ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದು, ಆಕ್ರೋಶಗೊಂಡು ಸ್ಥಳೀಯರ ಗುಂಪೊಂದು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ.
ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿರುವ ಬಾಲ್ತೇರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಅಮೃತ ಜಾಧವ್ ಎಂಬಾತ ಜೇನು ನೊಣ ಕಡಿತದಿಂದ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿದು ಆಕ್ರೋಶಗೊಂಡ ಸ್ಥಳೀಯರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರು. ಘಟನೆಯಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿದ್ದಾರೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳೀಯರು ಬಳಿಕ ಬೆಂಕಿ ಹಚ್ಚಿದ್ದು, ಮೂರು ಪೊಲೀಸ್ ವಾಹನಗಳೂ ಬೆಂಕಿಗಾಹುತಿಯಾಗಿವೆ.
ಹೋಳಿ ಹಬ್ಬದ ವೇಳೆ ಜೋರಾಗಿ ಹಾಡುಗಳನ್ನು ಹಾಕಿದ್ದಕ್ಕಾಗಿ ಅಮೃತ್ ಜಾಧವ್ನನ್ನು ಪೊಲೀಸರು ಕರೆತಂದಿದ್ದು, ಜೇನುನೊಣ ಕಡಿತದಿಂದ ಆ ವ್ಯಕ್ತಿ ಸಾವನ್ನಪ್ಪಿದ್ದ ಎಂದು ಬೆಟ್ಟಿಯಾದ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ನಾಥ್ ವರ್ಮಾ ತಿಳಿಸಿದ್ದಾರೆ.
ಬೇತಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾತಾವರಣ ಉದ್ವಿಗ್ನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಕೂಡ ಮುಂಜಾಗ್ರತೆ ವಹಿಸುತ್ತಿದ್ದಾರೆ. ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಜೀವಕಳೆ ಕಳೆದುಕೊಂಡು ಸ್ಮಶಾನದಂತಾದ ಉಕ್ರೇನ್ ನಗರಗಳು..