ಪಾಟ್ನಾ(ಬಿಹಾರ): ಬಿಹಾರದಲ್ಲಿ ಚಿನ್ನದ ಗಣಿ ಪತ್ತೆ ನಂತರ ಪೆಟ್ರೋಲಿಯಂ ನಿಕ್ಷೇಪಗಳು ಇರುವ ಬಗ್ಗೆ ಒಎನ್‌ಜಿಸಿ ಪ್ರಸ್ತಾಪಿಸಿದೆ. ಇದಕ್ಕಾಗಿ ಪೆಟ್ರೋಲಿಯಂ ಅನ್ವೇಷಣೆಗೆ ಪರವಾನಗಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಗೆ ಬಿಹಾರ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಒಎನ್‌ಜಿಸಿ ಈಗ ಬಕ್ಸಾರ್ ಮತ್ತು ಸಮಷ್ಟಿಪುರದ ಗಂಗಾನದಿಯ ಜಲಾನಯನ ಪ್ರದೇಶದ 360 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ನಿಕ್ಷೇಪಕ್ಕಾಗಿ ಅನ್ವೇಷಣೆ ನಡೆಸಲಿದೆ. ಪೆಟ್ರೋಲಿಯಂ ನಿಕ್ಷೇಪಗಳು ಕಂಡು ಬಂದಲ್ಲಿ ಅದು ಬಿಹಾರವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯಲಿದೆ.
ಪೆಟ್ರೋಲಿಯಂ ಪರಿಶೋಧನೆ ಪರವಾನಗಿ ಪಡೆದ ನಂತರ ಸಮಷ್ಟಿಪುರ ಮತ್ತು ಬಕ್ಸಾರ್‌ನ ಗಂಗಾ ಜಲಾನಯನ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತೈಲ ಅನ್ವೇಷಿಸಲು ಮುಂದಾಗಲಿದೆ.
ಒಎನ್‌ಜಿಸಿಗೆ ದೊರೆತ ಪರವಾನಗಿ: ಸಮಷ್ಟಿಪುರ ಜಿಲ್ಲೆಯ 308 ಕಿಮೀ ಮತ್ತು ಬಕ್ಸಾರ್‌ನ 52.13 ಕಿಲೋ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಸಿಗುವ ಸೂಚನೆಗಳಿವೆ. ಇಷ್ಟು ದೊಡ್ಡ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹುಡುಕಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಒಎನ್‌ಜಿಸಿಗೆ ಅನುಮತಿ ನೀಡಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತೈಲ ಪರಿಶೋಧನೆ ಮಾಡಲಾಗುವುದು ಎಂದು ಒಎನ್‌ಜಿಸಿ ಹೇಳಿದೆ.
ಗಣಿಗಾರಿಕೆಗೆ ಪರವಾನಗಿ ಪಡೆದ ನಂತರ ಒಎನ್‌ಜಿಸಿ ಭೂಕಂಪದ ದತ್ತಾಂಶಗಳನ್ನು ಬಳಸಿಕೊಂಡು ಸಮೀಕ್ಷೆ ಮಾಡಿದ ಪ್ರದೇಶಗಳ ಗುರುತ್ವಾಕರ್ಷಣೆಯ ಬಲ ಮತ್ತು ಕಾಂತೀಯ ಬಲವನ್ನು ವಿಶ್ಲೇಷಿಸುವ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಫಲಿತಾಂಶಗಳು ಸಕಾರಾತ್ಮಕವಾಗಿದ್ದರೆ, ಶೀಘ್ರದಲ್ಲೇ ಕಚ್ಚಾ ತೈಲದ ಪರಿಶೋಧನೆ ಪ್ರಾರಂಭವಾಗುತ್ತದೆ. ಈ ಹಿಂದೆ 2017-2018ರಲ್ಲಿಯೂ ಒಎನ್‌ಜಿಸಿ ಸಿವಾನ್, ಪುರ್ನಿಯಾ ಮತ್ತು ಬಕ್ಸಾರ್ ಜಿಲ್ಲೆಗಳಲ್ಲಿ ತೈಲ ಕ್ಷೇತ್ರಗಳ ಸಂಭಾವ್ಯತೆಯ ಬಗ್ಗೆ ಮಾಹಿತಿ ನೀಡಿತ್ತು.
ಕಂಪನಿಯು ಗಂಗಾ ನದಿಯ ಜಲಾನಯನ ಪ್ರದೇಶ, ರಾಜ್‌ಪುರ ಕಲಾನ್ ಪಂಚಾಯತ್ ಮತ್ತು ರಘುನಾಥಪುರದ ಸಿಮ್ರಿ ಗ್ರಾಮದಲ್ಲಿ ಮಣ್ಣನ್ನು ಅಗೆದು, ಮಾದರಿಗಳನ್ನು ಹೈದರಾಬಾದ್‌ನಲ್ಲಿರುವ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿತ್ತು.
ಓದಿ: ಕಿರುಕುಳ, ಬೆದರಿಕೆ: ನೂಪುರ್ ಶರ್ಮಾ ಕುಟುಂಬಕ್ಕೆ ದೆಹಲಿ ಪೊಲೀಸ್ ಭದ್ರತೆ!