ಮುಜಾಫ್ಪರ್ಪುರ, ಬಿಹಾರ: ವಿಷಪೂರಿತ ಮದ್ಯ ಸೇವಿಸಿ ನಾಲ್ವರು ಮೃತಪಟ್ಟ ಘಟನೆ ಬಿಹಾರದ ಮುಜಾಫ್ಪರ್ಪುರದಲ್ಲಿ ಶುಕ್ರವಾರ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಷೇಧಿಸಲ್ಪಟ್ಟ ಮದ್ಯವೇ ಸಾವಿಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ. ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಮಾಹಿತಿ ಗೊತ್ತಾಗಲಿದೆ. ಮದ್ಯ ಮತ್ತು ಹೋಮಿಯೋಪಥಿಗೆ ಸಂಬಂಧಿಸಿದ ಔಷಧದ ಬಾಟಲ್ಗಳನ್ನು ಕೂಡಾ ಸ್ಥಳದಿಂದ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆಯೊಂದರಲ್ಲಿ ಮದ್ಯದ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಮನೆ ಮಾಲೀಕನೂ ಕೂಡಾ ಸಾವನ್ನಪ್ಪಿದ್ದಾನೆ. ಅದೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಇನ್ನೂ ಹಲವು ಗ್ರಾಮಸ್ಥರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಈಗಾಗಲೇ ದೂರು ದಾಖಲು ಮಾಡಿಕೊಂಡಿದ್ದು, ಆಸ್ಪತ್ರೆಗೆ ಸೇರಿರುವ ವ್ಯಕ್ತಿಗಳ ವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಉಪಚುನಾವಣೆ ಫೈಟ್: ಮೂರು ಲೋಕಸಭೆ, 29 ವಿಧಾನಸಭೆ ಸ್ಥಾನಗಳಿಗೆ ಇಂದು ಮತದಾನ