ಗಾಂಧಿನಗರ(ಗುಜರಾತ್): ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ಬಿಜೆಪಿ ಸತತ 7 ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಹೊಸ ಸರ್ಕಾರದ ಮತ್ತು 18 ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು ಪದಗ್ರಹಣ ಮಾಡಲಿದ್ದಾರೆ. ಅವರೊಂದಿಗೆ 20 ಸಚಿವರು ಕೂಡ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವಿಧಾನಸಭೆಯ 182 ಸ್ಥಾನಗಳ ಪೈಕಿ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆದ್ದು ಚರಿತ್ರೆ ಸೃಷ್ಟಿಸಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿರುವ ಪಾಟೀದಾರ್ ಸಮುದಾದಯ ಭೂಪೇಂದ್ರ ಪಟೇಲ್ ದಾಖಲೆಯ 1.90 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದೂ ದಾಖಲೆಯೇ. ಈ ಎಲ್ಲ ದಾಖಲೆಗಳ ಮಧ್ಯೆ ಬಿಜೆಪಿ ರಾಜ್ಯದಲ್ಲಿ ಮತ್ತೆ 5 ವರ್ಷಗಳ ಕಾಲ ಅಧಿಕಾರ ನಡೆಸಲಿದೆ. ಈ ಮೂಲಕ ಪಶ್ಚಿಮಬಂಗಾಳದಲ್ಲಿ ಎಡರಂಗದ ಸತತ ಅಧಿಕಾರದ ದಾಖಲೆಯನ್ನು ಬಿಜೆಪಿ ಸರಿಗಟ್ಟಿದೆ.
ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ: ಗಾಂಧಿನಗರದ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯುವ ಅದ್ಧೂರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕರ್ನಾಟಕದಿಂಡ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಚುನಾವಣೆಯ ಫಲಿತಾಂಶದ ಮರುದಿನ (ಡಿಸೆಂಬರ್ 9) ಸಿಎಂ ಭೂಪೇಂದ್ರ ಪಟೇಲ್ ಅವರು ತಮ್ಮ ಸಚಿವ ಸಂಪುಟದ ಸಮೇತ ರಾಜೀನಾಮೆ ಸಲ್ಲಿಸಿದ್ದರು. ಡಿಸೆಂಬರ್ 10 ರಂದು ಶಾಸಕಾಂಗ ಸಭೆ ನಡೆದು ಭೂಪೇಂದ್ರ ಪಟೇಲ್ ನಾಯಕರಾಗಿ ಆಯ್ಕೆಯಾದರು. ಬಳಿಕ ರಾಜಭವನಕ್ಕೆ ತೆರಳಿದ ಬಿಜೆಪಿ ಶಾಸಕರು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ರಾಜ್ಯಪಾಲರು ಇದಕ್ಕೆ ಒಪ್ಪಿಗೆ ನೀಡಿದರು. ನಿಗದಿಯಂತೆ ಇಂದು ಪದಗ್ರಹಣ ಸಮಾರಂಭ ನಡೆಯಲಿದ್ದು, 20 ಕ್ಯಾಬಿನೆಟ್ ಸಚಿವರು ಸಹ ಸಿಎಂ ಜೊತೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಓದಿ: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಿಗದ ಆಸನ.. ಮುನಿಸಿಕೊಂಡು ಮಧ್ಯೆದಲ್ಲೇ ಎದ್ದೋದ ಬಿಜೆಪಿ ಸಂಸದ!